ದುಡಿಯುವುದಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಶಿರಸಿ ಸಾಲ್ಕಣಿಯ ರಾಜು ಶೆಟ್ಟಿ ಅವರು ಅನಾರೋಗ್ಯದ ಕಾರಣ ಊರಿಗೆ ಬಂದಿದ್ದು, ಮನೆ ಹಿಂದೆ ಹೊಸದಾಗಿ ನಿರ್ಮಿಸಿದ ಕೊಠಡಿಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಿರಸಿ ಸಾಲ್ಕಣಿಯಲ್ಲಿ ರಾಜು ಸುಬ್ಬಣ್ಣ ಶೆಟ್ಟಿ (48) ಅವರು ವಾಸವಾಗಿದ್ದರು. ದುಡಿಯುವುದಕ್ಕಾಗಿ ಅವರು ಬೆಂಗಳೂರಿಗೆ ಹೋಗಿದ್ದರು. ನೆಲಮಂಗಲದ ಹೊಟೇಲ್ ಒಂದರಲ್ಲಿ ಅವರು ಕುಕ್ ಹಾಗೂ ವೇಟರ್ ಆಗಿ ಕೆಲಸ ಮಾಡುತ್ತಿದ್ದರು. ದುಡಿಮೆಯ ಬಹುಪಾಲು ಹಣವನ್ನು ಅವರು ಸರಾಯಿ ಅಂಗಡಿಗೆವ್ಯಯಿಸುತ್ತಿದ್ದರು. ವಿಪರೀತ ಸರಾಯಿ ಸೇವನೆ ಕಾರಣ ರಾಜು ಶೆಟ್ಟಿ ಅವರು ಅನಾರೋಗ್ಯಕ್ಕೆ ಒಳಗಾದರು.
ಆರೋಗ್ಯ ಸರಿ ಇಲ್ಲದ ಕಾರಣ ರಾಜು ಶೆಟ್ಟಿ ಅವರು ಊರಿಗೆ ಮರಳಿದ್ದರು. ಆದರೆ, ಇಲ್ಲಿಯೂ ಅವರು ಮದ್ಯ ಸೇವನೆಯನ್ನು ಬಿಟ್ಟಿರಲಿಲ್ಲ. ಆರೋಗ್ಯ ಸರಿ ಇಲ್ಲದಿದ್ದರೂ ಕುಡಿತದಂದ ದೂರವಿರಲು ರಾಜು ಶೆಟ್ಟಿ ಅವರು ಮನಸ್ಸು ಮಾಡಲಿಲ್ಲ. ಮಾರ್ಚ 29ರ ರಾತ್ರಿಯೂ ಅವರು ಕಂಠಪೂರ್ತಿ ಕುಡಿದು ಮನೆಗೆ ಆಗಮಿಸಿದ್ದರು. ಪತ್ನಿ ಹಾಗೂ ಮಗಳು ಮಲಗಿದ ನಂತರ ಮನೆ ಹಿಂದೆ ಹೊಸದಾಗಿ ನಿರ್ಮಿಸಿದ ಕೊಠಡಿಗೆ ಹೋದರು.
ಅಲ್ಲಿಯೇ ಇದ್ದ ನೈಲಾನ್ ಹಗ್ಗ ಬಳಸಿ ರಾಜು ಶೆಟ್ಟಿ ಅವರು ನೇಣು ಹಾಕಿಕೊಂಡರು. ರಾಜು ಶೆಟ್ಟಿ ಅವರ ಪತ್ನಿ ಸರೋಜಾ ಶೆಟ್ಟಿ ಅವರು ಬೆಳಗ್ಗೆ ಪತಿ ಸಾವನಪ್ಪಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು. ಈ ಸಾವಿನ ಬಗ್ಗೆ ಅವರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.