ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಗೋಪಾಲಕೃಷ್ಣ ನಾಯಕ ಅವರ ತಲೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಗೋವಾ ದಿಕ್ಕಿನ ಕಡೆ ಓಡಿದ್ದಾರೆ.
ಅಂಕೋಲಾದ ಗೋಪಾಲಕೃಷ್ಣ ನಾಯಕ ಅವರು ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರಾಗಿ ಕೆಲಸ ಶುರು ಮಾಡಿದ್ದು, ತಮ್ಮ ನಾಯಕತ್ವ ಗುಣದಿಂದಾಗಿ ಅವರು ಕಾಂಗ್ರೆಸ್ ಪಕ್ಷದ ಅನೇಕ ಹುದ್ದೆಗಳನ್ನು ಅನುಭವಿಸಿದ್ದಾರೆ. ಕೆಪಿಸಿಸಿ ಸದಸ್ಯರಾಗಿಯೂ ಅವರು ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದಾರೆ. ತಮ್ಮ ರಾಜಕೀಯ ವರ್ಚಸ್ಸು ಹಾಗೂ ಪ್ರಭಾವದಿಂದ ಅವರು ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಆಪ್ತರಾಗಿದ್ದಾರೆ. ವರ್ಷದ ಹಿಂದೆ ಅಂಕೋಲಾಗೆ ಭೇಟಿ ನೀಡಿದ್ದ ಸಚಿವ ಜಿ ಪರಮೇಶ್ವರ ಅವರು ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸುವಷ್ಟರ ಮಟ್ಟಿಗೆರವರೆಗೂ ಗೋಪಾಲಕೃಷ್ಣ ನಾಯಕ ಅವರು ರಾಜಕೀಯವಾಗಿ ಬೆಳೆದಿದ್ದಾರೆ. ಭವಿಷ್ಯದಲ್ಲಿ ಶಾಸಕರಾಗುವ ಕನಸು ಕಂಡಿರುವ ಗೋಪಾಲಕೃಷ್ಣ ನಾಯಕ ಅವರು ಕಾರವಾರ-ಅಂಕೋಲಾ ವಿಧಾನಸಭಾ ಚುನಾವಣೆಯ ಆಕಾಂಕ್ಷಿಯೂ ಆಗಿದ್ದಾರೆ. ಹೀಗಿರುವಾಗ ಗೋಪಾಲಕೃಷ್ಣ ನಾಯಕ ಅವರ ಏಳಿಗೆ ಸಹಿಸದವರು ಅವರನ್ನು ಕೊಲೆ ಮಾಡುವುದಕ್ಕಾಗಿ ಸುಪಾರಿ ನೀಡಿದ್ದಾರೆ. ಬಿಹಾರದಿಂದ ಆಗಮಿಸಿದ ಹಂತಕರು ಮೂರು ದಿನಗಳ ಕಾಲ ಗೋಪಾಲಕೃಷ್ಣ ನಾಯಕ ಅವರ ಚಲನ-ವಲನ ಗಮನಿಸಿದ್ದು, ಬುಧವಾರ ಬೆಳಗ್ಗೆ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.
ಅಂಕೋಲಾ ಪಟ್ಟಣದ ಕಣಕಣೇಶ್ವರ ದೇವಾಲಯದ ಬಳಿ ಗೋಪಾಲಕೃಷ್ಣ ನಾಯಕ ಅವರು ಕಾರಿನಿಂದ ಇಳಿಯುವ ವೇಳೆ ಆರು ಜನ ಅವರ ಮೇಲೆ ಮುಗಿಬಿದ್ದಿದ್ದಾರೆ. ಹಠಾತ್ ದಾಳಿಯಿಂದ ತತ್ತರಿಸಿದ ಗೋಪಾಲಕೃಷ್ಣ ನಾಯಕ ಅವರು ಸಮೀಪದ ಬ್ಯಾಂಕ್ ಒಂದಕ್ಕೆ ತೆರಳಿ ಬಾಗಿಲು ಭದ್ರಪಡಿಸಿಕೊಂಡಿದ್ದಾರೆ. ಅದಾಗಿಯೂ ದುಷ್ಕರ್ಮಿಗಳು ಗೋಪಾಲಕೃಷ್ಣ ನಾಯಕ ಅವರ ತಲೆ, ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕು ಚುಚ್ಚಿದ್ದಾರೆ. ಗೋಪಾಲಕೃಷ್ಣ ನಾಯಕ ಅವರ ಜೊತೆಗಿದ್ದ ಮತ್ತೊಬ್ಬರಿಗೂ ಚಾಕು ತಗುಲಿದ್ದು ಗಾಯಗೊಂಡ ಇಬ್ಬರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಹಂತಕರ ಶೋಧ ನಡೆಸಿದ್ದಾರೆ. ಗೋವಾ ನೋಂದಣಿಯ ವಾಹನದಲ್ಲಿ ಹಂತಕರು ಆಗಮಿಸಿದ ಮಾಹಿತಿ ಹಿನ್ನಲೆ ಮಾಜಾಳಿಯಲ್ಲಿ ತಪಾಸಣೆ ಚುರುಕಾಗಿದ್ದು, ಸದ್ಯದ ಮಾಹಿತಿ ಪ್ರಕಾರ ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ. ಗೋಪಾಲಕೃಷ್ಣ ನಾಯಕ ಅವರ ಫೋಟೋಹಿಡಿದು ಆಗಮಿಸಿದ ದುಷ್ಕರ್ಮಿಗಳು ಆ ಫೋಟೋ ಆಧಾರದಲ್ಲಿಯೇ ಅವರನ್ನು ಗುರುತಿಸಿ ದಾಳಿ ನಡೆಸಿದ ಮಾಹಿತಿ ಲಭ್ಯವಾಗಿದೆ.
ಬೆಳಗ್ಗೆ 9.30ರ ವೇಳೆಗೆ ಕೊಲೆ ಪ್ರಯತ್ನ ನಡೆದಿದ್ದು, ಮಧ್ಯಾಹ್ನದ ಒಳಗೆ ಪೊಲೀಸರು ಶಂಕತರನ್ನು ಹಿಡಿದಿದ್ದಾರೆ. ನಾಲ್ವರು ಸಿಕ್ಕಿಬಿದ್ದಿದ್ದು, ಇನ್ನಿಬ್ಬರ ಶೋಧ ಮುಂದುವರೆದಿದೆ. ಪೊಲೀಸರು ಶಂಕಿತರ ವಿಚಾರಣೆ ಮುಂದುವರೆಸಿದ್ದು, ಕೊಲೆಗೆ ಸುಪಾರಿ ಕೊಟ್ಟವರು ಯಾರು? ಯಾವ ದ್ವೇಷಕ್ಕಾಗಿ ಕೊಲೆ ಪ್ರಯತ್ನ ನಡೆಯಿತು? ಎನ್ನುವ ಮಾಹಿತಿ ಬಹಿರಂಗವಾಗಬೇಕಿದೆ.