ಶಿರಸಿ ಬೈರುಂಬೆ ಬಳಿಯ ರಾಮಕೃಷ್ಣ ಹೆಗಡೆ ಅವರ ತೋಟದ ಕೆಲಸಕ್ಕೆ ಹೋಗಿದ್ದ ಜಟ್ಟಿ ಮುಕ್ರಿ ಅವರಿಗೆ ಜೇನು ಹುಳ ಕಚ್ಚಿದೆ. ಆ ನೋವು ಸಹಿಸಲಾಗದೇ ಅವರು ಸಾವನಪ್ಪಿದ್ದಾರೆ.
ಶಿರಸಿ ಬೈರುಂಬೆ ಬಳಿ ಜಟ್ಟಿ ನಾಗು ಮುಕ್ರಿ (61) ಅವರು ವಾಸವಾಗಿದ್ದರು. ಸುತ್ತಲಿನ ಊರುಗಳಲ್ಲಿ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಮಾರ್ಚ 29ರಂದು ಅವರು ಬೈರುಂಬೆ ಬಳಿಯ ಕಾಳೆಸರದ ರಾಮಕೃಷ್ಣ ಸುಬ್ರಾಯ ಹೆಗಡೆ ಅವರ ತೋಟದ ಕೆಲಸಕ್ಕೆ ಹೋಗಿದ್ದರು. ಇನ್ನಿತರ ಕಾರ್ಮಿಕರ ಜೊತೆ ಅವರು ಕೆಲಸ ಮಾಡುತ್ತಿದ್ದರು.
ಈ ವೇಳೆ ಬೆಟ್ಟದಿಂದ ಒಂದಷ್ಟು ಜೇನು ಹುಳ ತೋಟದ ಕಡೆ ಧಾವಿಸಿದವು. ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಆ ಹುಳಗಳು ಕಚ್ಚಿದವು. ಜಟ್ಟಿ ಮುಕ್ರಿ ಅವರಿಗೆ ಒಮ್ಮೆಲೆ 15 ಜೇನು ಹುಳ ಕಚ್ಚಿದ್ದು, ಆ ನೋವಿನಿಂದ ಅವರು ಅಸ್ವಸ್ಥರಾದರು. ಉಳಿದವರಿಗೆ ಒಂದೆರಡು ಜೇನು ಹುಳ ಮಾತ್ರ ಕಚ್ಚಿದ್ದು, ಅವರು ದೊಡ್ಡ ಸಮಸ್ಯೆ ಅನುಭವಿಸಲಿಲ್ಲ. ಅಸ್ವಸ್ಥಗೊಂಡ ಜಟ್ಟಿ ಮುಕ್ರಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಲಾಯಿತು. ಆ ದಿನ ಸಂಜೆಯೇ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದರು.
ಜೇನು ಕಚ್ಚಿದ ನೋವಿನಿಂದ ಬಳಲುತ್ತಿದ್ದ ಜಟ್ಟಿ ಮುಕ್ರಿ ಅವರು ಮಾರ್ಚ 30ರ ನಸುಕಿನಲ್ಲಿ ಒಮ್ಮೆಲೆ ದೊಡ್ಡ ಉಸಿರು ಎಳೆದರು. ಅದೇ ಅವರ ಕೊನೆ ಉಸಿರಾಗಿತ್ತು. ಈ ವೇಳೆ ಜೊತೆಯಲ್ಲಿದ್ದ ಜಟ್ಟಿ ಮುಕ್ರಿ ಅವರ ಮಗ ರಾಘು ಮುಕ್ರಿ ಅವರು ತಂದೆಯನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಜೇನು ಕಚ್ಚಿದ ಪರಿಣಾಮ ಜಟ್ಟಿ ಮುಕ್ರಿ ಅವರು ಸಾವನಪ್ಪಿದ ಬಗ್ಗೆ ರಾಘು ಮುಕ್ರಿ ಅವರು ಮಾಹಿತಿ ನೀಡಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.