ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಅಂಕೋಲಾದ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ನಾಯಕ ಅವರ ಕೊಲೆಗೆ ಪ್ರಭಾವಿ ಉದ್ಯಮಿಯೊಬ್ಬರು ಪ್ರಯತ್ನಿಸಿದ ಅನುಮಾನವ್ಯಕ್ತವಾಗಿದೆ. ಆ ಉದ್ಯಮಿಯ ಜೊತೆ ಶಾಸಕರು ಸಂಪರ್ಕದಲ್ಲಿರುವ ಬಗ್ಗೆ ಗೋಪಾಲಕೃಷ್ಣ ನಾಯಕ ಅವರೇ ಶಂಕೆವ್ಯಕ್ತಪಡಿಸಿದ್ದಾರೆ.
ಮಣಿಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಆಗಮಿಸಿದ ಗೋಪಾಲಕೃಷ್ಣ ನಾಯಕ ಅವರು ಅತ್ಯಂತ ಮಾರ್ಮಿಕವಾಗಿ ಮಾತನಾಡಿದ್ದಾರೆ. ತನ್ನ ಮೇಲೆ ರಾಜಕೀಯ ಕಾರಣದಿಂದ ಈ ದಾಳಿ ನಡೆದಿದೆ’ ಎಂದು ಅವರು ಹೇಳಿದ್ದಾರೆ. `ತಮ್ಮ ಮೇಲೆ ದಾಳಿ ಮಾಡಿದವರ ಜೊತೆ ಶಾಸಕರ ಸಂಪರ್ಕದಲ್ಲಿದ್ದಾರೆ’ ಎಂದು ಸಹ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ. `ಹೆಣ್ಣು, ಹೊನ್ನು ಹಾಗೂ ಮಣ್ಣಿಗಾಗಿ ಕೊಲೆಗಳಾಗುತ್ತವೆ. ನಾನು ಈವರೆಗೆ ಯಾರ ಆಸ್ತಿ ತೆಗೆದುಕೊಂಡಿಲ್ಲ. ಆಸ್ತಿ ಹೊಡೆದಿಲ್ಲ. ಆಸ್ತಿ ಪ್ರಕರಣಗಳಿಲ್ಲ. ಅದ್ಯಾವುದು ಇಲ್ಲ. ಹೀಗಾಗಿ ಇರುವುದೇ ರಾಜಕೀಯ ದ್ವೇಷ. ಬರುವ ಚುನಾವಣೆಯಲ್ಲಿ ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂಬ ದ್ವೇಷದಿಂದ ಈ ರೀತಿ ಆಗಿರಬಹುದು ಎಂಬುದು ಸ್ನೇಹಿತರ ಅಭಿಪ್ರಾಯ’ ಎಂದಿದ್ದಾರೆ.
`ಸಹಕಾರಿ ಚುನಾವಣೆಯಲ್ಲಿ ದ್ವೇಷ ನಡೆದಿದ್ದು ನಿಜ. ಅದರಲ್ಲಿ ಮುಚ್ಚುಮರೆ ಏನೂ ಇಲ್ಲ. ಏಳು ಸ್ಥಾನಕ್ಕೆ ಸ್ಪರ್ಧೆ ಮಾಡಿದಾಗ ಆ ಏಳು ಸ್ಥಾನವನ್ನು ನಾವು ಗೆದ್ದಿದ್ದೇವೆ. ಜನ ಆಶೀರ್ವಾದ ಮಾಡಿದಕ್ಕೆ ಗೆದ್ದಿದ್ದೇವೆ. ಗೆದ್ದ ದಿನ ಆರ್ ಎನ್ ನಾಯಕ ಅವರ ಪುತ್ರ ಅಲ್ಲಿ ಆಗಮಿಸಿ ಅವರದ್ದೇ ಆದ ಭಲ ಪ್ರದರ್ಶನಕ್ಕೆ ಯತ್ನಿಸಿದ್ದು, ಅದಕ್ಕೆ ನಾವು ಅವಕಾಶ ಕೊಡಲಿಲ್ಲ. ಅವರ ಪರ ನಮ್ಮ ಶಾಸಕರು ಇದ್ದರು. ಇದೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲಿಯೂ ಮುಚ್ಚುಮರೆ ಇಲ್ಲ’ ಎಂದು ಹೇಳಿದ್ದಾರೆ.
ಇನ್ನೂ, ಶಿರೂರು ಗುಡ್ಡ ಕುಸಿತ ವೇಳೆ ಮುಖ್ಯಮಂತ್ರಿಗಳು ತಮ್ಮ ಮನೆಗೆ ಆಗಮಿಸಿದ್ದರು. ಆಗ, ಸ್ಥಳೀಯ ಶಾಸಕರು ಗೇಟಿನಿಂದ ಒಳಗೆ ಬರಲಿಲ್ಲ. ರಾಜಿನಾಮೆ ಬೇಕಾದರೂ ಕೊಡುತ್ತೇನೆ. ನಮ್ಮ ಮನೆಗೆ ಬರುವುದಿಲ್ಲ ಎಂದು ಶಾಸಕರು ಹೇಳಿದ್ದು, `ಮನೆ ಗೇಟಿನ ಒಳಗೆ ಬರಲಿಲ್ಲ. ನೀವು ಮುಖ್ಯಮಂತ್ರಿ ಆಗಬೇಕು ಎನ್ನುವ ಕಾರಣಕ್ಕೆ ನಾವು ಈ ಶಾಸಕರನ್ನು ಗೆಲ್ಲಿಸಿದ್ದೇವೆ ಎಂದು ಆ ದಿನ ಮುಖ್ಯಮಂತ್ರಿಗಳ ಮುಂದೆಯೇ ಹೇಳಿದ್ದೇನೆ’ ಎನ್ನುತ್ತ ಗೋಪಾಲಕೃಷ್ಣ ನಾಯಕ ಅವರು ಹಳೆಯ ಘಟನಾವಳಿಗಳನ್ನು ನೆನಪಿಸಿಕೊಂಡರು.
ಶಾಸಕರು ಹಾಗೂ ತಮ್ಮ ನಡುವೆ ರಾಜಕೀಯ ದ್ವೇಷವಿರುವುದು ಹಳೆಯ ವಿಷಯ. ಆದರೆ, ಅವರು ಈ ಮಟ್ಟಕ್ಕೆ ಇಳಿಯುವ ಮನಸ್ಥಿತಿಯವರಲ್ಲ. ಆದರೆ, ಸುಪಾರಿ ನೀಡಿದವರು ಎನ್ನಲಾದ ವ್ಯಕ್ತಿಗಳ ಜೊತೆ ಶಾಸಕರು ಸಂಪರ್ಕದಲ್ಲಿರುವ ಸಾಧ್ಯತೆಗಳಿವೆ. ಮೊದಲೆ ಗೊತ್ತಾಗಿದ್ದರೆ ಸೂಕ್ತ ರಕ್ಷಣೆಪಡೆಯುತ್ತಿದ್ದೆ’ ಎಂದು ಗೋಪಾಲಕೃಷ್ಣ ನಾಯಕ ಅವರು ಹೇಳಿದ್ದಾರೆ.