ಕುಮಟಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಲಾಟೆ ನಡೆದಿದೆ. ಕಾಲೇಜಿನ ಲೆಕ್ಕಪತ್ರ ವಿಷಯದಲ್ಲಿ ಅಪರಾತಪರ ನಡೆದ ಬಗ್ಗೆ ಅನುಮಾನವ್ಯಕ್ತವಾಗಿದ್ದು, ಇದೇ ವಿಷಯ ಗಲಾಟೆಗೆ ಕಾರಣವಾಗಿದೆ.
ಕುಮಟಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿದ್ಧನಭಾವಿಯ ವಿಜಯ ದೇವಪ್ಪ ನಾಯ್ಕ ಅವರು ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿಗಳಾದ ಕಡೇಕೋಡಿ ನಾಗತೀರ್ಥದ ಚೈತ್ರೀಯ ಮುಕ್ರಿ ಹಾಗೂ ಹಿರೇಗುತ್ತಿಯ ಜ್ಞಾನೇಶ್ ನಾಯ್ಕ ಅವರು ಕಾಲೇಜಿನ ಲೆಕ್ಕಪತ್ರಗಳ ಬಗ್ಗೆ ಮಾಹಿತಿ ಕೇಳಿದ್ದಾರೆ. ಆ ಮಾಹಿತಿ ಸಿಗದ ಕಾರಣ ಅವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂಬುದು ಪ್ರಾಚಾರ್ಯ ವಿಜಯ ನಾಯ್ಕ ಅವರ ಆರೋಪ.
ಈ ವಿಷಯವಾಗಿ ಮಾತನಾಡಲು ಮಾರ್ಚ 27ರಂದು ಆ ಎರಡು ವಿದ್ಯಾರ್ಥಿಗಳನ್ನು ಪ್ರಾಚಾರ್ಯ ವಿಜಯ ನಾಯ್ಕ ಅವರು ಕ್ರೀಡಾ ಕೊಠಡಿಗೆ ಕರೆದಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿದ ಬಗ್ಗೆ ಅವರು ಪ್ರಶ್ನಿಸಿದ್ದಾರೆ. `ನೀವು ತಿನ್ನದಿದ್ದರೆ ಅದನ್ನು ಬರೆದುಕೊಡಿ’ ಎಂದು ಆಗ ಚೈತ್ರೀಯ ಮುಕ್ರಿ ಅವರು ದೊಡ್ಡದಾಗಿ ಕೂಗಿದ್ದಾರೆ. ಈ ವೇಳೆ ಚೈತ್ರೀಯ ಮುಕ್ರಿ ಅವರ ಹಾಜರಾತಿ ಗಮನಿಸಿದ ಪ್ರಾಚಾರ್ಯ ವಿಜಯ ನಾಯ್ಕ ಅವರು `ಹಾಜರಾತಿ ಕಡಿಮೆ ಇರುವ ಕಾರಣ ಪಾಲಕರನ್ನು ಕರೆದುಕೊಂಡು ಬರಬೇಕು’ ಎಂದು ಸೂಚಿಸಿದ್ದಾರೆ. ತಕ್ಷಣ ಚೈತ್ರೀಯ ಮುಕ್ರಿ ಅವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು, ತಪ್ಪಿಸಿಕೊಂಡಿದ್ದಾರೆ.
ಆ ವಿದ್ಯಾರ್ಥಿಗಳಿಬ್ಬರು ಕೇಳಿದ ಲೆಕ್ಕದ ಬಗ್ಗೆ ಊಹಾಪೂಹ ಹಬ್ಬಿದ್ದರಿಂದ ಪ್ರಾಧ್ಯಾಪಕರ ಸಭೆಯಲ್ಲಿ ಅದಕ್ಕೆ ಸ್ಪಷ್ಠೀಕರಣ ಕೊಡಲು ಪ್ರಾಚಾರ್ಯ ವಿಜಯ ನಾಯ್ಕ ಅವರು ನಿರ್ಧರಿಸಿದ್ದಾರೆ. ಹೀಗಾಗಿ ಅದೇ ದಿನ ಮಧ್ಯಾಹ್ನ ಸಭೆ ಆಯೋಜಿಸಿದ್ದು, ಅದಕ್ಕೆ ಚೈತ್ರೀಯ ಮುಕ್ರಿ ಹಾಗೂ ಜ್ಞಾನೇಶ ನಾಯ್ಕ ಅವರನ್ನು ಕರೆದಿದ್ದಾರೆ. ಮಧ್ಯಾಹ್ನ 3ಗಂಟೆಗೆ ಸಭೆ ಶುರುವಾಗಿದ್ದು, ಸಭೆ ನಡೆಯುವಾಗ ಅಲ್ಲಿ ವಿದ್ಯಾರ್ಥಿಗಳ ಪರವಾಗಿ ಮತ್ತಿಬ್ಬರು ಆಗಮಿಸಿದ್ದಾರೆ. ಪೊಷಕರು, ಆರ್ ಟಿ ಐ ಕಾರ್ಯಕರ್ತರು ಹಾಗೂ ಎಸ್‌ಸಿ ಎಸ್ಟಿ ಮುಖಂಡರು ಎಂದು ಪರಿಚಯಿಸಿಕೊಂಡ ಕುಮಟಾ ಕಡೇಕೊಡಿಯ ತಿಮ್ಮಪ್ಪ ಮುಕ್ರಿ ಹಾಗೂ ಸವಿತಾ ಮುಕ್ರಿ ಸೇರಿ ಪ್ರಾಚಾರ್ಯರಿಗೆ ಬೈದಿದ್ದಾರೆ.
ಏರುಧ್ವನಿಯಲ್ಲಿ ಮಾತನಾಡಿದ ತಿಮ್ಮಪ್ಪ ಮುಕ್ರಿ ಹಾಗೂ ಸವಿತಾ ಮುಕ್ರಿ ಅವರು `ನೀವೆಂಥ ಶಿಕ್ಷಕರು?’ ಎಂದು ಏಕವಚನದಲ್ಲಿ ಪ್ರಶ್ನಿಸಿದ್ದಾರೆ. `ಎಲ್ಲರನ್ನು ಟ್ರಾನ್ಸಫರ್ ಮಾಡಿಸುತ್ತೇನೆ’ ಎಂದು ಬೆದರಿಸಿದ್ದಾರೆ. ಕಚೇರಿ ಸಿಬ್ಬಂದಿಗೂ ಏಕವಚನದಲ್ಲಿ ಮಾತನಾಡಿ, ಶೈಕ್ಷಣಿಕ ಸಭೆಗೆ ಅಡ್ಡಿಪಡಿಸಿದ ಕಾರಣ ಕಾಲೇಜು ಪ್ರಾಚಾರ್ಯ ವಿಜಯ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ. ತಿಮ್ಮಪ್ಪ ಮುಕ್ರಿ, ಸವಿತಾ ಮುಕ್ರಿ ಅವರ ಜೊತೆ ವಿದ್ಯಾರ್ಥಿಗಳಾದ ಚೈತ್ರೀಯ ಮುಕ್ರಿ ಹಾಗೂ ಜ್ಞಾನೇಶ್ ನಾಯ್ಕ ಅವರ ವಿರುದ್ಧವೂ ವಿಜಯ ನಾಯ್ಕ ಅವರು ಪ್ರಕರಣ ದಾಖಲಿಸಿದ್ದಾರೆ.