ಹಳಿಯಾಳ ವಿಧಾನಸಭಾ ಕ್ಷೇತ್ರದ ಹಲವು ಕಡೆ ಕಸ ಹೆಚ್ಚಾಗಿರುವುದನ್ನು ನೋಡಿದ ಆ ಭಾಗದ ಶಾಸಕ ಆರ್ ವಿ ದೇಶಪಾಂಡೆ ಅವರು ಸೋಮವಾರ ಸ್ವತಃ ಪೊರಕೆ ಹಿಡಿದು ಬೀದಿ ಗುಡಿಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಕ್ಷೇತ್ರದ ಎಲ್ಲಡೆ ಸಂಚರಿಸಿ ಸ್ವಚ್ಛತಾ ಅಭಿಯಾನ ನಡೆಸುವುದಾಗಿ ಅವರು ಘೋಷಿಸಿದ್ದಾರೆ.
`ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರು ಹಾಕಿಕೊಟ್ಟ ಸ್ವಚ್ಛತೆಯ ಹಾದಿಯಲ್ಲಿ ನಾವು ಸಾಗಬೇಕು. ಸ್ವಚ್ಛತೆಯ ಕೆಲಸಕ್ಕೆ ಪೂರ್ಣವಿರಾಮ ಬೇಕಿಲ್ಲ. ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿ ಹಳ್ಳಿ, ಪಟ್ಟಣ, ಶೌಚಾಲಯ ಹಾಗೂ ಉದ್ಯಾನವನಗಳು ಸ್ವಚ್ಛವಾಗಿರಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಹಳಿಯಾಳ ವಿಧಾನ ಸಭಾ ಕ್ಷೇತ್ರದಾದ್ಯಂತ ಮಾರ್ಚ 30ರಿಂದ ಏಪ್ರಿಲ್ 1ರವರೆಗೆ ನಿರಂತರವಾಗಿ 3 ದಿನಗಳ ಕಾಲ ಸಂಪೂರ್ಣ ಸ್ವಚ್ಛತಾ ಕಾರ್ಯ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದವರು ಮಾಹಿತಿ ನೀಡಿದರು.
`ಹಳಿಯಾಳ ವಿಧಾನ ಸಭಾ ಕ್ಷೇತ್ರದ ಹಳಿಯಾಳ ದಾಂಡೇಲಿ, ಜೋಯಿಡಾ ತಾಲೂಕುಗಳ ನಗರ, ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಯಲಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಈ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು. ತಹಸೀಲ್ದಾರ್ ಫಿರೋಜ್ ಷಾ ಮಾತನಾಡಿ `ಗಾಂಧೀಜಿಯವರ ಸ್ವಚ್ಛತೆಯೇ ಸೇವೆ ಮತ್ತು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಧ್ಯೇಯವಾಕ್ಯಗಳೊಂದಿಗೆ ಶಾಸಕರ ಸೂಚನೆಯ ಮೇರೆಗೆ ಹಳಿಯಾಳ ತಾಲೂಕಿನ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಈ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ನಿರಂತರವಾಗಿ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಗುರಿಯನ್ನು ಹೊಂದಿದ್ದು, ಹಳಿಯಾಳ ತಾಲೂಕಿನ ಸಾರ್ವಜನಿಕರು ಈ ಅಭಿಯಾನಕ್ಕೆ ಸಂಪೂರ್ಣವಾಗಿ ಸಹಕರಿಸುತ್ತಿದ್ದಾರೆ’ ಎಂದರು.