ಉತ್ತರ ಕನ್ನಡ ಜಿಲ್ಲೆಯ ರೈತರ ಬ್ಯಾಂಕ್ ಖಾತೆಗೆ ಸರಿಸುಮಾರು 70 ಕೋಟಿ ರೂ ಬೆಳೆ ವಿಮೆ ಪರಿಹಾರ ದೊರೆತಿದೆ. ಈ ಹಿನ್ನಲೆ ಯಲ್ಲಾಪುರದ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಮಳೆ ಮಾಪನ ಯಂತ್ರ ಸರಿಪಡಿಸಲು ಮುತುವರ್ಜಿವಹಿಸದ ಶಾಸಕ ಶಿವರಾಮ ಹೆಬ್ಬಾರ್ ವರ ವರ್ತನೆಯನ್ನು ಖಂಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿಶೇಷ ಪ್ರಯತ್ನದಿಂದ ಬೆಳೆ ವಿಮೆ ಪರಿಹಾರ ಮೊತ್ತ ರೈತರಿಗೆ ಸಿಕ್ಕಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಮೆ ಪರಿಹಾರ ದೊರೆಯುವಂತೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಿರೀಕ್ಷೆ ಪ್ರಕಾರ ಇನ್ನಷ್ಟು ಪರಿಹಾರ ಬರಬೇಕಿದ್ದು, ಮಳೆ ಮಾಪನ ಯಂತ್ರಗಳು ಸರಿಯಾಗಿರದ ಕಾರಣ ಅವು ಬಂದಿಲ್ಲ. ರಾಜ್ಯ ಸರ್ಕಾರ ಮಳೆ ಮಾಪನ ಕೇಂದ್ರಗಳನ್ನು ದುರಸ್ಥಿ ಮಾಡಿಲ್ಲ. ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ಮಳೆ ಮಾಪನ ಕೇಂದ್ರ ದುರಸ್ಥಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿಲ್ಲ’ ಎಂದವರು ಅಸಮಧಾನವ್ಯಕ್ತಪಡಿಸಿದ್ದಾರೆ.
ಪ್ರಸಾದ ಹೆಗಡೆ ಅವರ ಮಾತಿಗೆ ಬಿಜೆಪಿ ಪ್ರಮುಖ ಉಮೇಶ ಭಾಗ್ವತ ಅವರು ತಲೆಯಾಡಿಸಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. `ಬೆಳೆ ಸಾಲ ಹಾಗೂ ಮಾಧ್ಯಮಿಕ ಸಾಲ ಮರು ಪಾವತಿ ಅವಧಿಯಲ್ಲಿ ಬೆಳೆ ವಿಮೆ ಜಮಾ ಆಗಿದ್ದರಿಂದ ರೈತರಿಗೆ ಅನುಕೂಲವಾಗಿದೆ. ಈ ಹಣವನ್ನು ರೈತರು ಸದುಪಯೋಗಪಡಿಸಿಕೊಂಡು ಸೊಸೈಟಿ ಸಾಲ ತೀರಿಸಲು ಬಳಸುತ್ತಿದ್ದಾರೆ. ಅದರಿಂದ ಸೊಸೈಟಿಗೂ ಸಾಕಷ್ಟು ಅನುಕೂಲ ಆಗಲಿದೆ’ ಎಂದು ಬಿಜೆಪಿ ಪ್ರಮುಖರಾದ ನಾಗರಾಜ ಕವಡಿಕೆರೆ ಅವರು ಹೇಳಿದ್ದಾರೆ. ಪ್ರಮುಖರಾದ ಮಹೇಶ ದೇಸಾಯಿ ಹಾಗೂ ರವಿ ದೇವಾಡಿಗ ಅವರು ಈ ವೇಳೆ ಹಾಜರಿದ್ದು, ಬೆಳೆ ವಿಮೆ ಪರಿಹಾರ ಸಿಕ್ಕಿದಕ್ಕೆ ಸಂತಸವ್ಯಕ್ತಪಡಿಸಿದ್ದಾರೆ.