ಸಿದ್ದಾಪುರದ ಶಿರಳಗಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜೇಶ ನಾಯ್ಕ ಅವರಿಗೆ ಕೊಲೆ ಬೆದರಿಕೆ ಬಂದಿದೆ. ವಡಗೇರಿಯ ಪ್ರಭು ದೊಡ್ಡಮನೆ ಅವರು ಈ ಬೆದರಿಕೆ ಹಾಕಿದ್ದು, ಸರ್ಕಾರಿ ಅಧಿಕಾರಿ ಮೇಲೆ ಕೈ ಮಾಡಿದ್ದಾರೆ.
ರಾಜೇಶ್ ರಾಮಚಂದ್ರ ನಾಯ್ಕ ಅವರು ಸಿದ್ದಾಪುರದ ಶಿರಳಗಿ ಗ್ರಾಮ ಪಂಚಾಯತದಲ್ಲಿ ಪಿಡಿಓ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಪ್ರಭು ದೊಡ್ಡಮನೆ ಅವರು ಗ್ರಾಮ ಪಂಚಾಯತ ಕಚೇರಿಗೆ ಅರ್ಜಿಯೊಂದನ್ನು ಸಲ್ಲಿಸಿದ್ದು, ಮಂಗಳವಾರ ಆ ಅರ್ಜಿ ವಿಷಯವಾಗಿ ಮಾತುಕಥೆಗೆ ಆಗಮಿಸಿದ್ದಾರೆ. ಮಧ್ಯಾಹ್ನ 1 ಗಂಟೆ ವೇಳೆಗೆ ಪಿಡಿಓ ಗ್ರಾಮ ಪಂಚಾಯತ ಕಚೇರಿಯಲ್ಲಿರುವಾಗ ಅಲ್ಲಿಗೆ ಆಗಮಿಸಿದ ಪ್ರಭು ದೊಡ್ಡಮನೆ ಅವರು ತಮ್ಮ ಅರ್ಜಿಯ ಬಗ್ಗೆ ಪ್ರಶ್ನಿಸಿದ್ದಾರೆ. `ಅರ್ಜಿಯಲ್ಲಿನ ಮಾಹಿತಿ ಅಸ್ಪಷ್ಟವಾಗಿದ್ದು, ಅಗತ್ಯ ದಾಖಲೆ ಒದಗಿಸಿ’ ಎಂದು ರಾಜೇಶ ನಾಯ್ಕ ಅವರು ಹೇಳಿದ್ದಾರೆ. `ಮಾರ್ಚ ಅಂತ್ಯವಾಗಿದ್ದರಿOದ ಕೆಲಸದ ಒತ್ತಡ ಹೆಚ್ಚಿದೆ. ಗುರುವಾರ ಹಿಂಬರಹ ಕೊಡುವೆ’ ಎಂದು ಸಹ ರಾಜೇಶ ನಾಯ್ಕ ಅವರು ತಿಳಿಸಿದ್ದಾರೆ.
ಪ್ರಭು ದೊಡ್ಡಮನೆ ಅವರು ಪತ್ನಿ ಹೆಸರಿನಲ್ಲಿ ವಾರದ ಹಿಂದೆ ಉದ್ದಿಮೆ ಪರವಾನಿಗೆಗಾಗಿ ಅರ್ಜಿ ಸಲ್ಲಿಸಿದ್ದು, ಅದು ಸಿಗದ ಕಾರಣ ಅರ್ಜಿದಾರರು ಸಿಟ್ಟಾಗಿದ್ದಾರೆ. ಕಚೇರಿ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಹೊರಟಿದ್ದ ರಾಜೇಶ ನಾಯ್ಕ ಅವರನ್ನು ಪ್ರಭು ದೊಡ್ಡಮನೆ ಅವರು ಅಡ್ಡಗಟ್ಟಿದ್ದಾರೆ. ಕೆಲಸ ಮಾಡಿಕೊಡದ ಕಾರಣ ಅತ್ಯಂತ ಕೆಟ್ಟದಾಗಿ ನಿಂದಿಸಿ, ಅವರ ಮೇಲೆ ಕೈ ಮಾಡಿದ್ದಾರೆ. `ನೀ ಈ ಪಂಚಾಯತದಲ್ಲಿ ಹೇಗೆ ಕೆಲಸ ಮಾಡುತ್ತೀಯಾ ಎಂದು ನೋಡುತ್ತೇನೆ. ನಿನ್ನ ಸುಮ್ಮನೆ ಬಿಡುವುದಿಲ್ಲ. ಕೊಲೆ ಮಾಡುತ್ತೇನೆ’ ಎಂದು ಪ್ರಭು ದೊಡ್ಡಮನೆ ಅವರು ರಾಜೇಶ ನಾಯ್ಕ ಅವರಿಗೆ ಬೆದರಿಸಿದ್ದಾರೆ. ತಮ್ಮ ಮೇಲಾದ ಹಲ್ಲೆ, ಕೊಲೆ ಬೆದರಿಕೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆ ಪ್ರಭು ದೊಡ್ಡಮನೆ ಅವರ ವಿರುದ್ಧ ರಾಜೇಶ ನಾಯ್ಕ ಅವರು ಪೊಲೀಸ್ ದೂರು ನೀಡಿದ್ದಾರೆ.