`ಕುಮಟಾದ ಪತ್ರಕರ್ತ ರಾಘವೇಂದ್ರ ದಿವಾಕರ್ ಅವರಿಗೆ ಕಾಡಿಸಿದ ಶ್ರೀಧರ ಕುಮಟಾಕರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ತೆರಳಿದ ಪತ್ರಕರ್ತರು ಅಧಿಕಾರಿಗಳ ಮುಂದೆ ಹಕ್ಕೊತ್ತಾಯ ಮಾಡಿದ್ದಾರೆ.
`ಕುಮಟಾ ಪಟ್ಟಣದ ಪೈರಗದ್ದೆಯ ಶ್ರೀಧರ ಕುಮಟಾಕರ್ ಅವರು ನೈತಿಕ ಪೋಲಿಸಗಿರಿ ಮಾಡುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಶುಕ್ರವಾರ ಪತ್ರಕರ್ತರು ಲಿಖಿತವಾಗಿ ಆಗ್ರಹಿಸಿದ್ದಾರೆ. ಪತ್ರಕರ್ತ ಸಂಘದ ಅಧ್ಯಕ್ಷ ಅನ್ಸಾರ್ ಶೇಖ ಅವರು ಈ ಪತ್ರ ನೀಡಿದ್ದು, ಸಂಘದ ಸದಸ್ಯರಾದ ಎಂ ಜಿ ನಾಯ್ಕ, ಎಸ್ ಜಿ ಭಟ್ಟ, ಚರಣರಾಜ ನಾಯ್ಕ, ಸುಧೀರ ನಾಯ್ಕ, ಸದಾಶಿವ ಹೆಗಡೆ, ಸುಬ್ರಹ್ಮಣ್ಯ ಭಟ್ಟ, ದಿಪೇಶ ನಾಯ್ಕ, ರಾಘವೇಂಧ್ರ ದಿವಾಕರ ಹಾಗೂ ವಿನೋದ ಹರಿಕಂತ್ರ ಸೇರಿ ಶ್ರೀಧರ ಕುಮಟಾಕರ್ ಅವರ ವಿರುದ್ಧ ಕಿಡಿಕಾರಿದ್ದಾರೆ.
`ಮಾರ್ಚ 26ರ ರಾತ್ರಿ 10.30ಕ್ಕೆ ಗಿಬ್ ಸರ್ಕಲ್‌ನಲ್ಲಿ ಲಾರಿ ಅಡ್ಡಹಾಕಿ ಚಾಲಕರಿಗೆ ಕಿರುಕುಳ ನೀಡುತ್ತಿದ್ದರು. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಪತ್ರಕರ್ತ ರಾಘವೇಂದ್ರ ದಿವಾಕರ್ ಅವರು ಅಲ್ಲಿಗೆ ಹೋಗಿದ್ದು, ಘಟನಾವಳಿಗಳ ವಿಡಿಯೋ ಮಾಡಿದ್ದರು. ಇದನ್ನು ನೋಡಿ ಸಿಟ್ಟಾದ ಶ್ರೀಧರ ಕುಮಟಾಕರ್ ಅವರು ರಾಘವೇಂದ್ರ ದಿವಾಕರ್ ಅವರಿಗೆ ಬೈದು ವಿಡಿಯೋ ಡಿಲಿಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಒಪ್ಪದ ಕಾರಣ ಎದೆಗೆ ಕೈ ಹಾಕಿ ದೂಡಿ ಹಲ್ಲೆ ಮಾಡಿದ್ದಾರೆ’ ಎಂದು ಪತ್ರಕರ್ತರು ವಿವರಿಸಿದರು. ವಂಚನೆ ಸೇರಿ ವಿವಿಧ ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀಧರ ಕುಮಟಾಕರ್ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.