ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಹಳಿಯಾಳದ ಅರಣ್ಯ ಸಿಬ್ಬಂದಿ ಮಲ್ಲಪ್ಪ ಯಲಗೋಡು ಅವರು ಏಕಾಏಕಿ ಬೆವರಲು ಶುರು ಮಾಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮಲ್ಲಪ್ಪ ಶಂಕರಪ್ಪ ಯಲಗೋಡು (53) ಅವರು ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಭಾಗವತಿಯಲ್ಲಿಯೇ ವಾಸವಾಗಿದ್ದ ಅವರು ಮಾರ್ಚ 27ರ ಸಂಜೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದರು. ಮನೆಗೆ ಮರಳಿದ ಕೂಡಲೇ ಅವರು ಬೆವರಲು ಶುರು ಮಾಡಿದ್ದು, ಇದನ್ನು ನೋಡಿದವರು ತಕ್ಷಣ ಹಳಿಯಾಳ ಆಸ್ಪತ್ರೆಗೆ ದಾಖಲಿಸಿದರು.
ಅಲ್ಲಿಂದ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಮಲ್ಲಪ್ಪ ಯಲಗೋಡು ಅವರನ್ನು ಧಾರವಾಡಕ್ಕೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ದಾರಿ ಮಧ್ಯೆಯೇ ಅವರು ಉಸಿರಾಟ ನಿಲ್ಲಿಸಿದರು. ಅದಾಗಿಯೂ ಅವರನ್ನು ಧಾರವಾಡ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಸಾವನ್ನು ದೃಢಪಡಿಸಿದರು. ಸಹೋದ್ಯೋಗಿ ಸಂಗಪ್ಪ ಯಲಗೋಡು ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.