ಭಟ್ಕಳದ ಅರ್ಬನ್ ಬ್ಯಾಂಕ್ ಹತ್ತಿರ ಹಲಸಿನ ಮೇಳ ಶುರುವಾಗಿದೆ. ಇಲ್ಲಿನ ಸಯ್ಯದ್ ಕಾಜ್ಮಿ ಟವರ್‌ನಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಹಲಸಿನ ಜೊತೆ ಮಾವಿನ ಹಣ್ಣುಗಳು ಇಲ್ಲಿ ಸಿಗುತ್ತವೆ. ಜೊತೆಗೆ ಹಣ್ಣಿನಿಂದ ಸಿದ್ಧಪಡಿಸಿದ ಹಲ್ವಾ ಮಾರಾಟವೂ ನಡೆದಿದೆ.
`ಹಲಸು ಹಾಗೂ ಮಾವಿನ ಹಣ್ಣು ಸಿಗುವವರೆಗೂ ಇಲ್ಲಿ ನಿತ್ಯ ಹಲಸು ಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ನಿಗದಿಪಡಿಸಲಾದ ದರ ಕೊಟ್ಟು ಗ್ರಾಹಕರು ಅಗತ್ಯ ಹಣ್ಣು ಖರೀದಿಸಬಹುದಾಗಿದ್ದು, ಖಾದ್ಯಗಳ ಸವಿಗೂ ಅವಕಾಶವಿದೆ. ಈ ನಿತ್ಯ ಹಲಸು ಮೇಳಕ್ಕೆ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಅವರು ಚಾಲನೆ ನೀಡಿದ್ದಾರೆ. ಹಲಸಿನ ಗಿಡಕ್ಕೆ ನೀರೆರೆದ ಅವರು `ಗಿಡ ಹೆಮ್ಮರವಾಗಿ ಬೆಳೆಯಲಿ’ ಎಂದು ಹಾರೈಸಿದ್ದಾರೆ.
ಭಟ್ಕಳದ ಜನರಿಗಾಗಿ ಬೇರೆ ಬೇರೆ ಹಣ್ಣುಗಳನ್ನು ತರಿಸಿದ ಪಾಂಡುರoಗ ನಾಯ್ಕ ಬೆಳಕೆ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಮಾಜ ಸೇವಕ ನಜೀರ್ ಕಾಶಿಮಜಿ, ಪ್ರಮುಖರಾದ ಪಾಂಡುರoಗ ನಾಯ್ಕ, ಅಬ್ದುಲ್ ವಾಸಿಫ್, ರಿಜ್ವಾನ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಸುರೇಶ ನಾಯಕ, ಹಿರಿಯ ವೈದ್ಯೆ ಡಾ ಸವಿತಾ ಕಾಮತ್, ಸನಾ ಆಪ್ಟಿಶಿಯನ್ಸ್ನ ಅಬ್ದುಲ್ ಜಬ್ಬಾರ್ ಇತರರು ಹಲಸು ಮೇಳಕ್ಕೆ ಆಗಮಿಸಿದ್ದಾರೆ.