`ಶಿರಸಿ ಜಾತ್ರೆಗೆ ಬರುವೆ’ ಎಂದು ಫೋನ್ ಮಾಡಿ ಹೇಳಿದ್ದ ಕಾರವಾರದ ಯಮಹಾ ಬೈಕ್ ಶೋರೂಮಿನ ಮ್ಯಾನೇಜರ್ ವಿವೇಕ ದೇವಾಡಿಗ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸದಾಶಿವಗಡದಲ್ಲಿ ವಾಸವಾಗಿದ್ದ ಅವರ ಮನೆಗೂ ಬೀಗ ಹಾಕಲಾಗಿದ್ದು, ಈವರೆಗೂ ವಿವೇಕ ದೇವಾಡಿಗ ಅವರ ಸುಳಿವು ಸಿಕ್ಕಿಲ್ಲ.
ಶಿರಸಿಯ ಹುಸುರಿ ಬಳಿಯ ಕಾನಕೊಪ್ಪದಲ್ಲಿ ವಿವೇಕ ಕೃಷ್ಣ ದೇವಾಡಿಗ ಅವರು ವಾಸವಾಗಿದ್ದರು. 25 ವರ್ಷದ ಅವರು ಕಳೆದ ಎರಡುವರೆ ವರ್ಷದಿಂದ ಕಾರವಾರದಲ್ಲಿ ನೆಲೆಸಿದ್ದರು. ಸದಾಶಿವಗಡದಲ್ಲಿರುವ ಯಮಹಾ ಶೋರೂಮಿನಲ್ಲಿ ಅವರು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಲ್ಲಿಯೇ ಬಾಡಿಗೆ ಮನೆಪಡೆದು ವಾಸವಾಗಿದ್ದರು. ಮಾರ್ಚ 3ರ ರಾತ್ರಿ 11 ಗಂಟೆಗೆ ವಿವೇಕ ದೇವಾಡಿಗ ಅವರು ತಮ್ಮ ತಂದೆ ಕೃಷ್ಣ ದೇವಾಡಿಗ ಅವರಿಗೆ ಕೊನೆಯದಾಗಿ ಫೋನ್ ಮಾಡಿದ್ದರು.
`ಶಿರಸಿ ಜಾತ್ರೆಗೆ ಬರುವೆ’ ಎಂದು ಅವರು ಆ ಫೋನಿನಲ್ಲಿ ಹೇಳಿದ್ದರು. ಬೆಂಗಳೂರಿನಲ್ಲಿರುವ ತಮ್ಮ ಹಾಗೂ ಶಿರಸಿಯಲ್ಲಿರುವ ತಾಯಿ ಜೊತೆ ಜಾತ್ರೆ ಪೇಟೆಗೆ ಹೋಗುವುದಾಗಿ ಅವರು ತಿಳಿಸಿದ್ದರು. ಆದರೆ, ಆ ದಿನ ಅವರು ಜಾತ್ರೆಯಲ್ಲಿ ಕಾಣಲಿಲ್ಲ. ಅದಾದ ನಂತರ ತಂದೆಯ ಸಂಪರ್ಕಕ್ಕೂ ಸಿಗಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ಕೃಷ್ಣ ದೇವಾಡಿಗ ಅವರು ಮಾರ್ಚ 6ರಂದು ಕಾರವಾರಕ್ಕೆ ಆಗಮಿಸಿ ಶೋಧ ನಡೆಸಿದರು. ಮಗ ವಾಸವಿದ್ದ ಮನೆ ಬಳಿ ತೆರಳಿದಾಗ ಅದಕ್ಕೆ ಬೀಗ ಹಾಕಿತ್ತು.
ಯಮಹಾ ಶೋರೂಮಿಗೆ ಹೋಗಿ ನೋಡಿದಾಗ ವಿವೇಕ ದೇವಾಡಿಗ ಅವರು ಅಲ್ಲಿಯೂ ಇರಲಿಲ್ಲ. ಅಲ್ಲಿನ ಸಿಬ್ಬಂದಿ ಬಳಿ ವಿಚಾರಿಸಿದಾಗ ಅಲ್ಲಿಯೂ ಕೆಲಸಕ್ಕೆ ಬಾರದಿರುವುದು ಅರಿವಿಗೆ ಬಂದಿತು. ಇಷ್ಟು ದಿನಗಳ ಕಾಲ ಮಗನಿಗಾಗಿ ಹುಡುಕಾಟ ನಡೆಸಿದ ಕೃಷ್ಣ ದೇವಾಡಿಗ ಅವರು ಇದೀಗ ಪೊಲೀಸರ ಮೊರೆ ಹೋದರು. ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿವೇಕ ದೇವಾಡಿಗ ಅವರ ಹುಡುಕಾಟ ಶುರು ಮಾಡಿದ್ದಾರೆ.