ಕಿವಿ ಕೇಳದ ಹಾಗೂ ಕಣ್ಣು ಮಂಜಾಗಿರುವ ನೋವಿನಲ್ಲಿಯೂ ಬೇರೆಯವರನ್ನು ಬಾಯ್ತುಂಬ ನಗಿಸುತ್ತಿದ್ದ ಲಕ್ಷ್ಮೀ ಅಜ್ಜಿ ಅವರು ಭೂಲೋಕದ ಯಾತ್ರೆ ಮುಗಿಸಿದ್ದಾರೆ. ದೈಹಿಕವಾಗಿ ಅವರು ಎಲ್ಲರನ್ನು ಅಗಲಿದ್ದರೂ ತಮ್ಮ ವಿಡಿಯೋಗಳ ಮೂಲಕ ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ಅವರು ಶಾಶ್ವತವಾಗಿ ಉಳಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಕೆರೆಹೊಸಳ್ಳಿ ಮೂಲದ ಈ ಅಜ್ಜಿ ಪ್ರಸ್ತುತ ಕಂಚಿನಳ್ಳಿಯಲ್ಲಿ ವಾಸವಾಗಿದ್ದರು. ಕಿವಿ ಸರಿಯಾಗಿ ಕೇಳುವುದಿಲ್ಲ ಎಂಬುದನ್ನು ಹೊರತುಪಡಿಸಿ ದೈಹಿಕ ಹಾಗೂ ಮಾನಸಿಕವಾಗಿ ಅವರು 20ರ ತರುಣಿಯರನ್ನು ನಾಚಿಸುವ ಹಾಗೇ ಬದುಕಿದ್ದರು. 93 ವರ್ಷದ ಅವರು `ಜಾಸ್ತಿ ನೀರು ಕುಡಿಯುವುದು ಹಾಗೂ ರಾಗಿ ಗಂಜಿಯೇ ಆರೋಗ್ಯದ ಗುಟ್ಟು’ ಎಂದು ಅವರು ಸಂದರ್ಶನದ ವೇಳೆ ಹೇಳಿಕೊಂಡಿದ್ದರು.
ವರ್ಷದ ಹಿಂದೆ ಸತ್ಯ ನಾರಾಯಣ ಕಥೆಯ ಪ್ರಸಾದ ಕೊಡಲು ಆಹಾರ ಮೇಳಕ್ಕೆ ತೆರಳಿದ್ದ ಅವರು ಆಹಾರ ಮೇಳದ ಮೊದಲ ಬಹುಮಾನ ಪಡೆದಿದ್ದರು. ಅದಕ್ಕೂ ಮೊದಲು ಹೆಣ್ಣು ನೋಡುವ ಶಾಸ್ತ್ರ ಮಾಡಿಸಿ ಜನರನ್ನು ನಗೆ ಕಡಲಿನಲ್ಲಿ ತೇಲಿಸಿದ್ದರು. ಇಂಥ ನೂರಾರು ಹಾಸ್ಯವನ್ನು ಒಳಗೊಂಡ ಸೂರಜ್ ಹಾಗೂ ಲಕ್ಷ್ಮೀ ಅಜ್ಜಿಯ ಕಾಮಿಡಿ ವಿಡಿಯೋಗಳನ್ನು ನೋಡಿ ಜನ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದರು.
ಅಜ್ಜಿಯನ್ನು ಮುಖ್ಯ ವೇದಿಕೆಗೆ ತರುವಲ್ಲಿ ಸೂರಜ್ ಅವರ ಪಾತ್ರ ಅಪಾರವಾಗಿದ್ದು, ಅಜ್ಜಿಗೂ ಸಹ ಸೂರಜ್ ಎಂದರೆ ಅಚ್ಚುಮೆಚ್ಚಾಗಿತ್ತು. ಅಂದ ಹಾಗೇ, ಈ ಅಜ್ಜಿ ನಿಜವಾಗಿಯೂ ಸೂರಜ್ ಅವರ ಅಜ್ಜಿ ಮಾತ್ರವಲ್ಲ. ಸೂರಜ್ ಅವರ ಅಮ್ಮನ ಅಮ್ಮನ ಅಮ್ಮನಾಗಿದ್ದರು. ಹುಬ್ಬಳ್ಳಿ-ಮಂಚಿಕೇರಿ ಹಾಗೂ ಬೆಂಗಳೂರು ತಿರುಗಾಟ ನಡೆಸಿ ಸ್ನೇಹಿತರ ಜೊತೆ ಸೇರಿ ಅವರು ನವಿರಾದ ಹಾಸ್ಯ ವಿಡಿಯೋ ಮಾಡುವ ಸೂರಜ್ ಅವರು ಡಬ್ಬಿಂಗ್, ಕ್ಯಾಮರಾ, ಸಂಭಾಷಣೆ, ವಿಡಿಯೋ ಎಡಿಟಿಂಗ್ ಎಲ್ಲವನ್ನು ಒಬ್ಬರೇ ನಿಭಾಯಿಸುತ್ತಿದ್ದು ಊರಿನಲ್ಲಿರುವಾಗ ಮುತ್ತಜ್ಜಿಯ ಜೊತೆ ಕಾಲ ಕಳೆಯುತ್ತಿದ್ದರು. ಆ ವೇಳೆಯಲ್ಲಿಯೇ ಅವರು ಅಜ್ಜಿಯ ಜೊತೆ ವಿಡಿಯೋ ಮಾಡಿ ಹರಿಬಿಡುತ್ತಿದ್ದರು. ಆದರೆ, ಇನ್ಮುಂದೆ ಸೂರಜ್ ಅವರ ವಿಡಿಯೋದಲ್ಲಿ ಲಕ್ಷ್ಮೀ ಅಜ್ಜಿ ಕಾಣಿಸುವುದಿಲ್ಲ. ಕಾರಣ ಆ ಅಜ್ಜಿ ಇನ್ನಿಲ್ಲ.
ಈವರೆಗೂ ಅಜ್ಜಿಯ ಕಾಮಿಡಿ ವಿಡಿಯೋದಲ್ಲಿ ಜನರ ಮೇಲೆ ದುಷ್ಪರಿಣಾಮ ಬೀರುವ ಜಾಹೀರಾತುಗಳ ಪ್ರಚಾರ ನಡೆಸಿಲ್ಲ. `ಗಿಡ ಮರಗಳನ್ನು ಬೆಳೆಸಿ. ನೀವು ಒಳ್ಳೆಯರಾಗಿರಿ.. ಬೇರೆಯವರಿಗೂ ಒಳ್ಳೆಯದು ಮಾಡೋಣ’ ಎಂಬುದು ಅಜ್ಜಿಯ ಹಿತನುಡಿಯಾಗಿದ್ದು, ಅವರ ಅಭಿಮಾನಿಗಳು ಅದನ್ನು ಪಾಲಿಸಿದರೆ ಅದುವೇ ಆ ಹಿರಿಯ ಚೇತನಕ್ಕೆ ನಾವು ಸಲ್ಲಿಸುವ ನಮನ.