ಮದುವೆಯಾಗಿ 24 ವರ್ಷ ಕಳೆದರೂ ಮಕ್ಕಳಾಗದ ಕಾರಣ ಶಿರಸಿಯ ಶಕುಂತಲಾ ಹೆಗಡೆ ಅವರು ಬಾವಿಗೆ ಹಾರಿದ್ದಾರೆ. ಆಳದ ಬಾವಿಯಲ್ಲಿದ್ದ ನೀರು ಕುಡಿದು ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಶಿರಸಿ ಉಳ್ಳಾಳ ದ್ಯಾವರ್ಸದಲ್ಲಿ ಶಕುಂತಲಾ ಗಣಪತಿ ಹೆಗಡೆ (46) ಅವರು ವಾಸವಾಗಿದ್ದರು. 24 ವರ್ಷದ ಹಿಂದೆ ಶಕುಂತಲಾ ಹೆಗಡೆ ಅವರ ವಿವಾಹ ನಡೆದಿತ್ತು. ಗಣಪತಿ ನರಸಿಂಹ ಹೆಗಡೆ ಅವರನ್ನು ಶಕುಂತಲಾ ಹೆಗಡೆ ಅವರು ವರಿಸಿದ್ದರು. ಆದರೆ, ಈ ದಂಪತಿಗೆ ಮಕ್ಕಳಾಗಿರಲಿಲ್ಲ.
ಮಕ್ಕಳಿಲ್ಲದ ಕಾರಣ ಶಕುಂತಲಾ ಹೆಗಡೆ ಅವರು ಸಾಕಷ್ಟು ನೊಂದಿದ್ದರು. ಇದೇ ವಿಷಯವಾಗಿ ಅವರು ಮಾನಸಿಕವಾಗಿಯೂ ಕುಗ್ಗಿದ್ದರು. ಮಾರ್ಚ 26ರ ರಾತ್ರಿ 11.30ಕ್ಕೆ ಶಕುಂತಲಾ ಹೆಗಡೆ ಅವರ ಗಂಡ ಮನೆಯಲ್ಲಿರಲಿಲ್ಲ. ವಯಸ್ಸಾದ ಅತ್ತೆ ಮನೆಯಲ್ಲಿ ಮಲಗಿದ್ದರು. ಅವರ ಅರಿವಿಗೆ ಬಾರದಂತೆ ಮನೆ ಬಾಗಿಲ ಚಿಲಕ ತೆಗೆದ ಶಕುಂತಲಾ ಹೆಗಡೆ ಅವರು ಹೊರಗಡೆಯಿಂದ ಬಾಗಿಲ ಲಾಲದಂಡೆ ಹಾಕಿದರು.
ಅದಾದ ನಂತರ ಮನೆ ಮುಂದಿದ್ದ ಸಿಮೆಂಟ್ ರಿಂಗಿನ ಬಾವಿಯ ಕಡೆ ಹೆಜ್ಜೆ ಹಾಕಿದರು. ಬಾವಿಯ ಮುಚ್ಚಳ ತೆರೆದು ಅದರೊಳಗೆ ಹಾರಿದರು. ಬೆಳಕು ಹರಿಯುವಷ್ಟರಲ್ಲಿ ಶಕುಂತಲಾ ಹೆಗಡೆ ಅವರು ಶವವಾಗಿದ್ದರು. ತಂಗಿ ಸಾವಿನ ಸುದ್ದಿ ಕೇಳಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಮಹೇಂದ್ರ ದಿಗಂಬರ ಹಬ್ಬು ಅವರು ಊರಿಗೆ ಬಂದರು. ಸಾವಿನ ಬಗ್ಗೆ ಅವರು ಪೊಲೀಸರಿಗೆ ವರದಿ ಒಪ್ಪಿಸಿದ್ದು, ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದರು.