ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಅಂಕೋಲಾದ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದ ದಾಳಿ ಪ್ರಕರಣ ದಿನಕ್ಕೊಂದು ಸ್ವರೂಪಪಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಗೋಪಾಲಕೃಷ್ಣ ನಾಯಕ ಅವರು ಆರ್ ಎನ್ ನಾಯಕ ಅವರ ಪುತ್ರರ ಮೇಲೆ ಆರೋಪ ಮಾಡಿದ್ದು, ಈ ಆರೋಪವನ್ನು ಮಯೂರ ನಾಯಕ ಕುಟುಂಬದವರು ಅಲ್ಲಗೆಳೆದಿದ್ದಾರೆ.
`ಗೋಪಾಲಕೃಷ್ಣ ನಾಯಕ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಮ್ಮ ಕುಟುಂಬದ ಹೆಸರನ್ನು ಅನವಶ್ಯಕವಾಗಿ ಎಳೆದು ತರಲಾಗಿದೆ. ದುರುದ್ದೇಶದಿಂದ ಈ ಆರೋಪ ಮಾಡಲಾಗಿದ್ದು, ವೈಯಕ್ತಿಕವಾಗಿ ತೇಜೋವಧೆ ಮಾಡುವ ಹುನ್ನಾರ ನಡೆದಿದೆ’ ಎಂದು ಉದ್ಯಮಿ ಮಯೂರ ಆರ್ ನಾಯಕ ಕುಟುಂಬ ತಿಳಿಸಿದೆ. `ಹಲ್ಲೆ ಪ್ರಕರಣದ ಈ ಅವಕಾಶವನ್ನು ಬಳಸಿಕೊಂಡು ಗೋಪಾಲಕೃಷ್ಣ ನಾಯಕ ಅನವಶ್ಯಕವಾಗಿ ಆರ್ ಎನ್ ನಾಯಕ ಹಾಗೂ ಮಯೂರ ನಾಯಕ ಹೆಸರನ್ನು ಪ್ರಸ್ತಾಪಿಸಿರುವುದು ಸರಿಯಲ್ಲ. ತಮ್ಮ ದ್ವೇಷಕ್ಕೆ, ದುರುದ್ದೇಶಕ್ಕೆ ಒಂದು ದಿಕ್ಕು ಗೊತ್ತುಮಾಡುವ ಹಾಗೂ ಸ್ವಪ್ರಚಾರ ಪಡೆದುಕೊಳ್ಳುವ ಸಲುವಾಗಿ ಈ ಬಗ್ಗೆ ಆರೋಪಿಸಲಾಗಿದೆ. ತಾವು ನಿಶ್ಚಿತವಾಗಿ ಆರೋಪಿಸಬೇಕಾದ ವ್ಯಕ್ತಿಯ ಗೊತ್ತು ಗುರಿಯಿಲ್ಲದೆಯೋ ಅಥವಾ ಅವರನ್ನು ತಲುಪಲು ಸಾಧ್ಯವಾಗದು ಎಂಬ ಕಾರಣದಿಂದ ಪ್ರಕರಣದ ದಿಕ್ಕು ತಪ್ಪಿಸಲು ಮಯೂರ ನಾಯಕ ಅವರ ಕಡೆ ಆರೋಪ ಮಾಡಿದ ಹಾಗೇ ಭಾಸವಾಗುತ್ತಿದೆ. ಪ್ರಕರಣದ ದಿಕ್ಕು ತಪ್ಪಿಸಿಯಾದರೂ ಲಾಭ ಪಡೆದುಕೊಳ್ಳಬೇಕು ಎಂಬ ಉದ್ದೇಶಕ್ಕೆ ಈ ಮಾರ್ಗ ಅನುಸರಿಸುತ್ತಿರುವಂತೆ ಕಾಣುತ್ತಿದೆ’ ಎಂದು ಮಯೂರ್ ನಾಯಕ ಅವರ ಕುಟುಂಬದವರು ಹೇಳಿಕೆ ನೀಡಿದ್ದಾರೆ.
`ಈ ಪ್ರಕರಣಕ್ಕೆ ಯಾವುದೇ ರೀತಿಯ ಸಂಬoಧ ಇಲ್ಲದೆ ಇದ್ದರೂ ಕೂಡ ಹಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ಒತ್ತಡ ಹಾಕಿಸಿ ಕೇಸನ್ನು ಮಯೂರ ನಾಯಕ ಮೇಲೆ ಎಳೆಯುವ ಹುನ್ನಾರ ನಡೆಸುವ ಅನುಮಾನವೂ ಕಾಡಿದೆ. ಸಹಕಾರಿ ಚುನಾವಣೆಯಲ್ಲಿ ಹಲವರೊಂದಿಗೆ ಗೋಪಾಲಕೃಷ್ಣ ನಾಯಕ ವಾಗ್ವಾದ ನಡೆಸಿದ ಕುರಿತು ಮಾಧ್ಯಮಗಳಲ್ಲಿಯೂ ವರದಿಯಾಗಿದೆ. ಆದರೆ ಕೇವಲ ಮಯೂರ ನಾಯಕ ಹೆಸರನ್ನು ಮಾತ್ರ ಬಳಕೆ ಮಾಡಿರುವುದು ಅಲ್ಲದೇ ಕೆಲವು ಮಾಧ್ಯಮಗಳ ವರದಿಗಳಲ್ಲಿ ತಪ್ಪು ಕಲ್ಪನೆ ಮೂಡುವಂತೆ ಆ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ಬೇರೆಡೆಗೆ ಸೆಳೆಯುವ ಕುತಂತ್ರ ಅಡಗಿದೆ. ಹೀಗಾಗಿ ಆರ್ ಎನ್ ನಾಯಕ ಕುಟುಂಬದ ಆತ್ಮೀಯ ಬಾಂಧವರು ಈ ವದಂತಿ ಇಲ್ಲವೇ ಕಪೋಕಲ್ಪಿತ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಬಾರದು’ ಎಂದು ಮಯೂರ ನಾಯಕ ಕುಟುಂಬದವರು ಮನವಿ ಮಾಡಿದ್ದಾರೆ. ಜೊತೆಗೆ `ಹಲ್ಲೆ ಪ್ರಕರಣದ ತನಿಖೆ ನ್ಯಾಯೋಚಿತವಾಗಿ ನಡೆಯುವುದೆಂಬ ಭರವಸೆ ನಮಗೂ ಇದೆ’ ಎಂದವರು ಮಾಧ್ಯಮ ಪ್ರಕಟಣೆ ಮೂಲಕ ಹೇಳಿದ್ದಾರೆ.