ಹೈದರಬಾದಿನಿಂದ ಹುಬ್ಬಳ್ಳಿಗೆ ಬರಬೇಕಿದ್ದ ವಿಮಾನವೊಂದು ದಿಕ್ಕು ತಪ್ಪಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾರಾಟ ನಡೆಸಿದೆ. ಮುಂಡಗೋಡು ಹಾಗೂ ಹಳಿಯಾಳದ ವಿವಿಧ ಕಡೆ ಸುತ್ತಾಟ ನಡೆಸಿದ ಆ ವಿಮಾನ ಕೊನೆಗೆ ಹುಬ್ಬಳ್ಳಿ ಬದಲು ಬೆಂಗಳೂರಿಗೆ ಹೋಗಿ ಭೂ ಸ್ಪರ್ಶ ಮಾಡಿದೆ!
Fly91 ಏರ್ ಲೈನ್ಸ್ ವಿಮಾನ ಹೈದರಬಾದಿನಿಂದ ಹೊರಟಿದ್ದು, ಆ ವಿಮಾನ ಹುಬ್ಬಳ್ಳಿಗೆ ತಲುಪಬೇಕಿತ್ತು. ಆದರೆ, ಆ ವಿಮಾನ ನಿಯಂತ್ರಣ ಕಳೆದುಕೊಂಡಿದ್ದು, ನಾಲ್ಕು ಗಂಟೆಗಳ ಕಾಲ ಆಕಾಶದಲ್ಲಿ ಹೆಚ್ಚುವರಿಯಾಗಿ ಹಾರಾಟ ನಡೆಸಿತು. ವಿಮಾನ ಏಕಾಏಕಿ ನಿಯಂತ್ರಣ ತಪ್ಪಿದ್ದರಿಂದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ಅನೇಕರು ತುರ್ತು ಪರಿಸ್ಥಿತಿಯ ಬಗ್ಗೆ ತಮ್ಮ ಕುಟುಂಬದವರಿಗೆ ಮೆಸೆಜ್ ಮಾಡಿ ಸಾವು-ಬದುಕಿನ ಮದ್ಯೆ ಹೋರಾಡುತ್ತಿರುವ ಸನ್ನಿವೇಶವನ್ನು ವಿವರಿಸಿದರು. ಹವಾಮಾನ ವೈಪರಿತ್ಯದಿಂದ ವಿಮಾನ ಹುಬ್ಬಳ್ಳಿಯಲ್ಲಿ ಇಳಿಯುತ್ತಿಲ್ಲ ಎಂದು ವಿಮಾನಯಾನ ಸಂಸ್ಥೆಯವರು ಹೇಳಿದ್ದು, ಜನ ಅದನ್ನು ಒಪ್ಪಲು ಸಿದ್ಧವಿರಲಿಲ್ಲ.
ಹುಬ್ಬಳ್ಳಿಯಲ್ಲಿ ಭೂ ಸ್ಪರ್ಶವಾಗಬೇಕಿದ್ದ ವಿಮಾನ ಇಲ್ಲಿ ಲ್ಯಾಂಡಿAಗ್ ಸಮಸ್ಯೆ ಅನುಭವಿಸಿತು. ಆಕಾಶದಲ್ಲಿ ಹಾರಾಟ ನಡೆಸುತ್ತಲೇ ಆ ವಿಮಾನ ಉತ್ತರ ಕನ್ನಡ ಜಿಲ್ಲೆಯನ್ನು ತಲುಪಿತು. ಮುಂಡಗೋಡು ಹಾಗೂ ಹಳಿಯಾಳ ಭಾಗದಲ್ಲಿ ಆ ವಿಮಾನ ಅತ್ಯಂತ ವೇಗವಾಗಿ ಸಂಚರಿಸಿದ್ದು, ಒಳಗಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾದರು. ದೇವರಿಗೆ ಕೈ ಮುಗಿದು ಪ್ರಯಾಣಿಕರು `ನಮ್ಮನ್ನು ಜೀವಂತವಾಗಿ ಮರಳಿಸು’ ಎಂದು ಬೇಡಿಕೊಂಡರು. `ನಾವು ಜೀವಂತವಾಗಿ ಬರುವುದು ಅನುಮಾನ’ ಎಂದು ಸಹ ಕೆಲವರು ಕುಟುಂಬದವರಿಗೆ ಮೆಸೆಜ್ ಮಾಡಿದ್ದರು. `ವಿಮಾನ ನಿಯಂತ್ರಣ ತಪ್ಪಿದರೂ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ನೀಡಿಲ್ಲ’ ಎಂದು ಕೆಲವರು ಆರೋಪಿಸಿದರು.
ಹವಾಮಾನ ಸಹಕರಿಸದ ಕಾರಣ ಮತ್ತು ತಾಂತ್ರಿಕ ದೋಷದ ಭೀತಿಯಿಂದಾಗಿ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಅಲ್ಲಿ ವಿಮಾನ ಸುರಕ್ಷಿತವಾಗಿ ಭೂಮಿಯನ್ನು ಸ್ಪರ್ಶಿಸಿತು.