ಶಿರಸಿಯ ಅಂಧ ವಿದ್ಯಾರ್ಥಿನಿ ಲಿಝಾ ಖಾನಮ್ ಅವರು ಪರೀಕ್ಷೆ ಬರೆದಿದ್ದರೂ `ಗೈರು’ ಎಂದು ಫಲಿತಾಂಶ ನೀಡಿದ್ದ ಪರೀಕ್ಷಾ ಮಂಡಳಿ ನಡೆಯನ್ನು ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಪ್ರಶ್ನಿಸಿದ್ದು, ಎಚ್ಚೆತ್ತ ಪರೀಕ್ಷಾ ಮಂಡಳಿ ಒಂದೇ ದಿನದಲ್ಲಿ ಸರಿಯಾದ ಫಲಿತಾಂಶ ನೀಡಿದೆ. ಜೊತೆಗೆ ಪರೀಕ್ಷಾ ಮಂಡಳಿಯಯವರೇ ವಿದ್ಯಾರ್ಥಿ ಪಾಲಕರಿಗೆ ಫೋನ್ ಮಾಡಿ ಕ್ಷಮೆಯನ್ನು ಕೋರಿದ್ದಾರೆ.
ಶಿರಸಿಯ ಯೂನಿಯನ್ ಪ್ರೌಢಶಾಲೆಯ ವಿದ್ಯಾರ್ಥಿನಿ ಲಿಝಾ ಖಾನಮ್ ಅವರು ಬಾಲ್ಯದಿಂದಲೂ ಕುರುಡರಾಗಿದ್ದು, ಅವರ ಅಂಗವಿಕಲತೆ ಸಾಧನೆಗೆ ಅಡ್ಡಿ ಆಗಿರಲಿಲ್ಲ. ಆದರೆ, ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸಿದರೂ ಅವರು ಪರೀಕ್ಷೆಗೆ ಗೈರಾದ ಬಗ್ಗೆ ಅಂಕಪಟ್ಟಿಯಲ್ಲಿ ನಮೂದಿಸಿದ್ದು ಆಘಾತಕ್ಕೆ ಕಾರಣವಾಗಿತ್ತು. ಪರೀಕ್ಷಾ ಮಂಡಳಿ ಮಾಡಿದ ಅವಾಂತರದಿoದ ಲಿಝಾ ಖಾನಮ್ ಅವರು ಹೆದರಿದ್ದರು. ತಮಗಾದ ಅನ್ಯಾಯದ ಬಗ್ಗೆ ಅವರು ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ಹೇಳಿಕೊಂಡಿದ್ದರು. ತಕ್ಷಣ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಭೀಮಣ್ಣ ನಾಯ್ಕ ಅವರು ಫೋನ್ ಮಾಡಿ, ಸಮಸ್ಯೆ ಹೇಳಿದ್ದರು.
ಲಿಝಾ ಖಾನಮ್ ಅವರು ಪ್ರಥಮ ಭಾಷೆ ಉರ್ದುವಿನಲ್ಲಿ 124, ಕನ್ನಡದಲ್ಲಿ 100 ಅಂಕಪಡೆದಿದ್ದರು. ಉಳಿದ ಪರೀಕ್ಷೆಯಲ್ಲಿಯೂ ಉತ್ತಮ ಅಂಕಪಡೆದಿದ್ದರು. ಆದರೆ, ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗದ ಬಗ್ಗೆ ಅಂಕಪಟ್ಟಿಯಲ್ಲಿ ನಮೂದಿಸಲಾಗಿತ್ತು. ಶಿಕ್ಷಣ ಇಲಾಖೆ ಮಾಡಿದ ಎಡವಟ್ಟಿನಿಂದ ಅಂದ ವಿದ್ಯಾರ್ಥಿನಿಗೆ ಅನ್ಯಾಯವಾಗಿದ್ದು, ಮಾನಸಿಕ ಹಿಂಸೆ ಅನುಭವಿಸಿದ್ದರು. ಈ ವಿಷಯ ಅರಿತ ಭೀಮಣ್ಣ ನಾಯ್ಕ ಅವರು ತಮ್ಮ ಬಲ ಪ್ರದರ್ಶಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಆದ ಪ್ರಮಾದ ಸರಿಪಡಿಸಿದರು. ವಿಷಯ ಹೊರಬಿದ್ದ ಒಂದೇ ದಿನದಲ್ಲಿ ಪರೀಕ್ಷಾ ಮಂಡಳಿ ತಪ್ಪನ್ನು ಸರಿಪಡಿಸಿದೆ. ಇದರಿಂದ ಲಿಝಾ ಖಾನಮ್ ಅವರ ಎಸ್ ಎಸ್ ಎಲ್ ಸಿ ಫಲಿತಾಂಶ ಶೇ 96.48ರಷ್ಟಾಗಿದೆ. ಕನ್ನಡಕ್ಕೆ 100, ಉರ್ದು 124, ಇಂಗ್ಲಿಷ್ 92, ಅರ್ಥಶಾಸ್ತ್ರ 98, ರಾಜ್ಯಶಾಸ್ತ್ರ 92 ಅಂಕಪಡೆದಿರುವ ಅವರು ಸಮಾಜ ಶಾಸ್ತ್ರದಲ್ಲಿಯೂ 97 ಅಂಕಪಡೆದಿದ್ದಾರೆ.