ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಸ್ಪೋಟವಾಗಿದೆ. ಅಗಸೂರು ಸಮೀಪದ ಕಂಚಿನಬಾಗಿಲು ಹೆದ್ದಾರಿಯಲ್ಲಿ ಟ್ಯಾಂಕರ್ ಹೊತ್ತಿ ಉರಿದಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕೆಎ 48 ಎ 2330 ನೋಂದಣಿ ಸಂಖ್ಯೆಯ ಟ್ಯಾಂಕರ್ ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಆ ಟ್ಯಾಂಕರ್ ಅಪಘಾತಕ್ಕೀಡಾಯಿತು. ಅಪಘಾತದ ವೇಳೆ ಅಗ್ನಿಸ್ಪರ್ಶವಾಗಿದ್ದು, ಟ್ಯಾಂಕರ್ ಹೊತ್ತಿ ಉರಿಯಿತು. ಬಾಂಬ್ ಸಿಡಿದ ರೀತಿಯಲ್ಲಿ ದೊಡ್ಡ ಸ್ಪೋಟ ಸಂಭವಿಸಿದ್ದು, ಸುತ್ತಲಿನ ಜನ ಬೆಚ್ಚಿ ಬಿದ್ದರು. ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದರೂ ಅಲ್ಲಿದ್ದ ಜನರಿಂದ ಸಮೀಪ ಹೋಗಲು ಸಾಧ್ಯವಾಗಲಿಲ್ಲ. ಇನ್ನಷ್ಟು ದೊಡ್ಡ ಪ್ರಮಾಣದ ಬೆಂಕಿ ಆವರಿಸುವ ಹಿನ್ನಲೆ ಸ್ಥಳೀಯರು ಭಯಭೀತರಾಗಿರುವುದು ಕಾಣಿಸಿತು.
ಟ್ಯಾಂಕರ್‌ಗೆ ಬೆಂಕಿ ಬಿದ್ದ ವಿಷಯದ ಬಗ್ಗೆ ತುರ್ತು ಸಹಾಯವಾಣಿಗೆ ಫೋನ್ ಮಾಡಲು ಪ್ರಯತ್ನಿಸಿದರಾದರೂ ನೆಟ್‌ವರ್ಕ ಸಮಸ್ಯೆ ಕಾಡಿತು. ಅದಾಗಿಯೂ, ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಅಗ್ನಿಶಾಮಕ ಸಿಬ್ಬಂದಿ, ಹೈವೇ ಪೆಟ್ರೋಲ್ ಹಾಗೂ ಪೊಲೀಸರಿಗೆ ಫೋನ್ ಮಾಡಿ ವಿಷಯ ಮುಟ್ಟಿಸಿದರು. ಅವಘಡದ ವೇಳೆ ಟ್ಯಾಂಕರ್ ಒಳಗಿದ್ದ ಚಾಲಕ ಹಾರಿದನ್ನು ಅಲ್ಲಿದ್ದವರು ನೋಡಿದ್ದಾರೆ. ಬಾಗಲಕೋಟೆಯ ಉದ್ಯಮಿಯೊಬ್ಬರಿಗೆ ಸೇರಿದ ಟ್ಯಾಂಕರ್ ಇದಾಗಿದ್ದು, ಈ ಟ್ಯಾಂಕರ್ ಯಲ್ಲಾಪುರದಿಂದ ಅಂಕೋಲಾ ಮಾರ್ಗವಾಗಿ ಚಲಿಸುವಾಗ ಅವಘಡ ನಡೆದಿದೆ. ಅವಘಡದಲ್ಲಿ ಚಾಲಕನಿಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿದೆ.
ಅಗ್ನಿ ಅವಘಡದ ಪರಿಣಾಮ ದಟ್ಟ ಹೊಗೆ ಕಾಣಿಸಿಕೊಂಡಿದೆ. ಬಿಸಿಲಿನ ಜೊತೆ ಅಗ್ನಿಯ ಶಾಖವೂ ಸುತ್ತಲಿನ ಪ್ರದೇಶವನ್ನು ಆವರಿಸಿದೆ. ಹೆದ್ದಾರಿ ಸಂಚಾರವನ್ನು ಬಂದ್ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಶುರುವಾಗಿದೆ. ಸದ್ಯ ಬೆಂಕಿ ಆರಿಸುವ ಪ್ರಯತ್ನ ಮುಂದುವರೆದಿದೆ. ಟ್ಯಾಂಕರ್ ಹೊತ್ತಿ ಉರಿಯಲು ಸ್ಪಷ್ಟ ಕಾರಣ ಹಾಗೂ ಚಾಲಕನ ಸ್ಥಿತಿ-ಗತಿ ಬಗ್ಗೆ ಇನ್ನಷ್ಟು ಮಾಹಿತಿ ಬರಬೇಕಿದೆ.