ಕಾರವಾರ ಕೋರ್ಟಿಗೆ ನಕಲಿ ಆಧಾರ್ ಕಾರ್ಡ ನೀಡಿದ್ದ ಮಹಿಳೆ ನ್ಯಾಯಾಂಗ ವ್ಯವಸ್ಥೆಯನ್ನೇ ಯಾಮಾರಿಸಲು ಪ್ರಯತ್ನಿಸಿದ್ದು, ಸದ್ಯ ಆ ಆಧಾರ್ ಕಾರ್ಡ ಜರಾಕ್ಸ್ ಮಾಡಿದ ಮಳಿಗೆಯವರು ಪೇಚಿಗೆ ಸಿಲುಕಿದ್ದಾರೆ. ಪ್ರಕರಣದ ಸಾಕ್ಷಿಯಾಗಿ ಪೊಲೀಸರು ಜರಾಕ್ಸ್ ಅಂಗಡಿ ಮಾಲಕನ ಮೊಬೈಲ್ ಜಪ್ತು ಮಾಡಿದ್ದಾರೆ!
Advertisement. Scroll to continue reading.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಅಲೈಸ್ ಕುರಿಯನ್ ಚಾಕೋ ಎಂಬ ಮಹಿಳೆ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ ಕೊಡುವುದನ್ನು ರೂಢಿಸಿಕೊಂಡಿದ್ದರು. ವಿವಿಧ ಪ್ರಕರಣಗಳಲ್ಲಿ ಜೈಲು ಸೇರುವ ಕೈದಿಗಳಿಗೆ ಅಲೈಸ್ ಚಾಕೋ ಅವರು ಜಾಮೀನು ನೀಡುತ್ತಿದ್ದು, ಜಾಮೀನು ನೀಡುವ ವೇಳೆ ನಕಲಿ ದಾಖಲೆಗಳನ್ನು ಹಾಜರುಪಡಿಸುತ್ತಿದ್ದರು. 2025ರ ಜೂನ್ 23ರಂದು ಕಾರವಾರದ ನ್ಯಾಯಾಲಯಕ್ಕೆ ಆಗಮಿಸಿದ್ದ ಅಲೈಸ್ ಚಾಕೋ ಅವರು ಪ್ರಮುಖ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿದ್ದರು. ಜಾಮೀನು ನೀಡುವ ವೇಳೆ ಅವರು ನೀಡಿದ್ದ ಆಧಾರ್ ಕಾರ್ಡ ಪರಿಶೀಲಿಸಿದಾಗ ಅದು ನಕಲಿ ಎಂದು ಗೊತ್ತಾಗಿತ್ತು.
ಈ ಬಗ್ಗೆ ತಪಾಸಣೆ ನಡೆಸಿದಾಗ ರಾಜ್ಯದ ಎಂಟು ಕಡೆ ಅಲೈಸ್ ಚಾಕೋ ಅವರು ನಕಲಿ ಆಧಾರ್ ಕಾರ್ಡ ನೀಡಿ ಕೈದಿಗಳಿಗೆ ಜಾಮೀನು ನೀಡಿರುವ ಅಂಶ ಬೆಳಕಿಗೆ ಬಂದಿತ್ತು. ಆ ಎಲ್ಲಾ ಆಧಾರ್ ಕಾರ್ಡ ಸಂಖ್ಯೆಗಳು ಬೇರೆ ಬೇರೆಯಾಗಿದ್ದು, ನ್ಯಾಯಾಧೀಶರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಜೊತೆಗೆ ಅಲೈಸ್ ಕುರಿಯನ್ ಚಾಕೋ ವಿರುದ್ಧ ಕೇಸು ದಾಖಲಿಸಲು ಸೂಚನೆ ನೀಡಿದ್ದರು. ಈ ಹಿನ್ನಲೆ ನ್ಯಾಯಾಲಯದ ಸಿಬ್ಬಂದಿ ರವೀಂದ್ರ ನಾಯ್ಕ ಅವರು ಕಾರವಾರ ಶಹರ ಠಾಣೆಯಲ್ಲಿ ನಕಲಿ ಆಧಾರ್ ಕಾರ್ಡ ನೀಡುತ್ತಿದ್ದ ಅಲೈಸ್ ಕುರಿಯನ್ ಚಾಕೋ ವಿರುದ್ಧ ಪ್ರಕರಣ ದಾಖಲಿಸಿದ್ದರು.
Advertisement. Scroll to continue reading.
Advertisement. Scroll to continue reading.
ಈ ಪ್ರಕರಣ ಬೆನ್ನತ್ತಿದ ಪೊಲೀಸರು ನಕಲಿ ಆಧಾರ್ ಕಾರ್ಡ ಜರಾಕ್ಸ್ ಅಂಗಡಿಯ ಬಳಿ ತೆರಳಿದರು. ಕಾರವಾರದ ಬ್ರಾಹ್ಮಣಗಲ್ಲಿಯಲ್ಲಿರುವ ಮಾಹಾಮಾಯಿ ಜರಾಕ್ಸ್ ಮಳಿಗೆಯ ಕದ ತಟ್ಟಿದ ಪೊಲೀಸರು ಆಧಾರ್ ಕಾರ್ಡ ಬಗ್ಗೆ ಪ್ರಶ್ನಿಸಿದರು. ಅಲ್ಲಿದ್ದ ಗಜಾನನ ಮೇಸ್ತಾ ಅವರು `ಆ ಮಹಿಳೆ ತನ್ನ ಮೊಬೈಲಿಗೆ ಕಳುಹಿಸಿದ ಆಧಾರ್ ಕಾರ್ಡನ್ನು ಜರಾಕ್ಸ್ ಮಾಡಿ ಕೊಟ್ಟಿದ್ದೇನೆ’ ಎಂಬ ಸತ್ಯ ಬಿಚ್ಚಿಟ್ಟರು. `ಆ ಮೊಬೈಲ್ ತೋರಿಸಿ’ ಎಂದು ಹೇಳಿದ ಪೊಲೀಸರು ಸಾಕ್ಷಿಯಾಗಿ ಆ ಮೊಬೈಲನ್ನು ಜಪ್ತು ಮಾಡಿದರು. `ಆರೋಪಿತ ಮಹಿಳೆ ಬಸ್ಸು-ರೈಲಿನಲ್ಲಿ ಸಹ ಓಡಾಡಿದ್ದಾಳೆ. ಆ ಬಸ್ಸು-ರೈಲನ್ನು ಸಹ ಜಪ್ತು ಮಾಡಿ’ ಎಂದು ಅಂಗಡಿ ಮಾಲಕರು ಆಗ್ರಹಿಸಿದರೂ ಅದನ್ನು ಯಾರೂ ಕೇಳಲಿಲ್ಲ!
ಮೊಬೈಲಿಗೆ ಬಂದ ಆಧಾರ್ ಕಾರ್ಡ ಜರಾಕ್ಸ ಮಾಡಿ ಕೊಟ್ಟ ಕಾರಣ ಮೊಬೈಲ್ ಜಪ್ತು ಮಾಡಿದ ವಿಷಯದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಂಜಯ ಶಾನಭಾಗ ಅವರಿಗೆ ಗೊತ್ತಾಯಿತು. ಈ ಕ್ರಮದ ಬಗ್ಗೆ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. `ಸದ್ಯ ಆ ಮೊಬೈಲ್ ಡೆಟ್ ಆಗಿದೆ. ಸಿಮ್ ರೀಚಾರ್ಜ ಮಾಡದ ಕಾರಣ ಆಕ್ಟಿವ್ ಆಗಿಲ್ಲ. ಹೀಗಿದ್ದರೂ ಮೊಬೈಲ್ ಇಟ್ಟುಕೊಂಡು ಪ್ರಯೋಜನವಿಲ್ಲ. ಅದನ್ನು ಮರಳಿಸಬೇಕು’ ಎಂದವರು ಕಾನೂನು ಹೋರಾಟ ಶುರು ಮಾಡಿದ್ದಾರೆ.