`ಅವೈಜ್ಞಾನಿಕ ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ಕೈ ಬಿಡಬೇಕು’ ಎಂದು ಹೋರಾಟಗಾರ ಚಂದ್ರಕಾoತ ಕೊಚರೇಕರ ಅವರು ಆಗ್ರಹಿಸಿದ್ದಾರೆ. `ಪಶ್ಚಿಮಘಟ್ಟದ ಅಮೂಲ್ಯ ಮಳೆಕಾಡನ್ನು ನಾಶಪಡಿಸಿ ಇಂಥ ಯೋಜನೆ ಜಾರಿ ಮಾಡುವ ಅಗತ್ಯವೇ ಇಲ್ಲ’ ಎಂದವರು ಪ್ರತಿಪಾದಿಸಿದ್ದಾರೆ.
`ಪರಿಸರ ಸೂಕ್ಷ್ಮ ಶರಾವತಿ ಕಣಿವೆಯ ಎರಡು ಜಲಾಶಯಗಳ ನಡುವೆ ಭೂಗತ ಸುರಂಗ ಕೊರೆದು ಪಂಪ್ಡ ಸ್ಟೋರೇಜ ವಿದ್ಯುತ್ ಯೋಜನೆ ಅನುಷ್ಠಾನಿಸುವ ರಾಜ್ಯ ಸರ್ಕಾರದ ಅವಾಸ್ತವಿಕ ಅವೈಜ್ಞಾನಿಕ ನಿರ್ಧಾರವನ್ನು ಕೂಡಲೇ ಕೈಬಿಡಬೇಕು’ ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿಯ ಪರವಾಗಿ ಆ ಸಮಿತಿ ಅಧ್ಯಕ್ಷ ಚಂದ್ರಕಾAತ ಕೊಚರೇಕರ ಅವರು ರಾಜ್ಯದ ಇಂಧನ ಸಚಿವ ಕೆ ಜೆ ಜಾರ್ಜ ಅವರಿಗೆ ಪತ್ರವನ್ನು ಬರೆದಿದ್ದಾರೆ. `ಶರಾವತಿ ಕೊಳ್ಳದಲ್ಲಿ ಪಂಪ್ ಸ್ಟೋರೇಜ ಭೂಗತ ವಿದ್ಯುತ ಯೋಜನೆಯ ಅನುಷ್ಠಾನದಿಂದ ಹೊನ್ನಾವರ ತಾಲ್ಲೂಕಿನ ವಿನಾಶ ನಿಶ್ಚಿತ ಎಂದು ತಜ್ಞರು ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಟಿ ವಿ ರಾಮಚಂದ್ರನ್ ಮತ್ತು ಸುಭಾಷಚಂದ್ರ ಅವರೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ವ ಪಕ್ಷಗಳ ಅಧ್ಯಕ್ಷರು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರು ಸೇರಿದಂತೆ ಪ್ರಜ್ಞಾವಂತ ನಾಗರಿಕರು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದಾರೆ. ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ಯೋಜನೆಯನ್ನು ಕೈಬಿಡಬೇಕು. ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪಂಪ್ ಸ್ಟೋರೇಜ್ ಯೋಜನೆ ಅನುಷ್ಠಾನ ಮಾಡುವ ಬದಲಿಗೆ ಸರಕಾರ ಬೇರೆ ಬದಲೀ ಸುರಕ್ಷಿತ ಇಂದನ ಮೂಲಗಳ ಮೊರೆ ಹೋಗಬೇಕು ಎಂದು ಸಭೆ ಮೂಲಕ ಆಗ್ರಹಿಸಲಾಗಿದೆ’ ಎಂದವರು ವಿವರಿಸಿದ್ದಾರೆ.
`ತಜ್ಞರು ನೀಡಿರುವ ಎಚ್ಚರಿಕೆಯ ಬಗ್ಗೆ ಹಾಗೂ ಭೂಮಿಯ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಜಿಲ್ಲೆಯ ಜನರನ್ನು ಅತಂತ್ರರನ್ನಾಗಿಸುವ ಪರಿಸರ ನಾಶಮಾಡುವ ಯಾವುದೇ ಯೋಜನೆಯ ಹೇರಿಕೆ ಮಾಡುವದನ್ನು ಸರ್ಕಾರಗಳು ನಿಲ್ಲಿಸಬೇಕು. ಕೇಂದ್ರದ ಅಧ್ಯಯನ ತಂಡ ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದ್ದು ಯೋಜನೆಯ ಅನುಷ್ಠಾನಕ್ಕೆ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದೆ. ಹೀಗಿರುವಲ್ಲಿ ಅದರ ವರದಿಯನ್ನು ನಿರ್ಲಕ್ಷ್ಯ ಮಾಡಿ ರಾಜ್ಯ ಸರ್ಕಾರ ಪಂಪ್ ಸ್ಟೋರೇಜ ಯೋಜನೆಯ ಅನುಷ್ಠಾನಕ್ಕೆ ಹಠ ಹಿಡಿದಿರುವದು ಸರಿಯಲ್ಲ’ ಎಂದಿದ್ದಾರೆ.