ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಅಣು ಸ್ಥಾವರ ಸ್ಥಾಪನೆಗೆ NTPC ಆಸಕ್ತಿವಹಿಸಿದ್ದು, `ಈ ಪ್ರದೇಶ ಘಟಕ ಸ್ಥಾಪನೆಗೆ ಸೂಕ್ತವಲ್ಲ’ ಎಂದು ಜಿಲ್ಲಾಡಳಿತ ಹೇಳಿದೆ.
ಅಂಕೋಲಾದ ಭಾವಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಅಣು ಸ್ಥಾವರ ಸ್ಥಾಪನೆ ವಿಷಯವಾಗಿ ಸರ್ಕಾರ ಜಿಲ್ಲಾಡಳಿತದ ಬಳಿ ವರದಿ ಕೇಳಿತ್ತು. ಈ ಬಗ್ಗೆ ವರದಿ ನೀಡಿದ ಜಿಲ್ಲಾಡಳಿತ `ಅಣು ಸ್ಥಾವರ ಸ್ಥಾಪನೆಗೆ ಭಾವಿಕೇರಿ ಸೂಕ್ತವಲ್ಲ’ ಎಂದು ಸರ್ಕಾರಕ್ಕೆ ತಿಳಿಸಿದೆ. `ಭಾವಿಕೇರಿ ಗ್ರಾಮವು ಪ್ರಸ್ತಾಪಿತ ಭಾರತೀಯ ನೌಕಾಪಡೆ ವಿಮಾನ ನಿಲ್ದಾಣ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ನೌಕಾಪಡೆ ಆವರಣಗಳು ಗ್ರಾಮ ಮಿತಿಯೊಳಗೆ ಬರುತ್ತವೆ. ಈ ಕಾರಣದಿಂದ ಈ ಪ್ರದೇಶವು ತಂತ್ರಮೂಲಕ ಹಾಗೂ ಭದ್ರತಾ ದೃಷ್ಟಿಯಿಂದ ಅತ್ಯಂತ ಸಂವೇದನಾಶೀಲವಾಗಿದೆ’ ಎಂದು ಜಿಲ್ಲಾಡಳಿತ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
ಜೊತೆಗೆ `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರವು ಭಾವಿಕೇರಿ ಗ್ರಾಮದಿಂದ ಸುಮಾರು 45-50 ಕಿಮೀ ವೈಮಾನಿಕ ದೂರದಲ್ಲಿ ಸ್ಥಿತಿಯಲ್ಲಿದ್ದು, ಈ ಪ್ರದೇಶವು ಭದ್ರತಾ ದೃಷ್ಟಿಯಿಂದ ಮಹತ್ವದ ವಲಯವಾಗಿರುತ್ತದೆ. ಭಾವಿಕೇರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ & ನೌಕಾನೆಲೆ ಯೋಜನೆಗಳಲ್ಲಿ ಭೂಮಿ ಕಳೆದುಕೊಂಡಿರುವ ಭೂ ನಿರಾಶ್ರಿತರು ನೆಲೆಸಿದ್ದು ಇರುತ್ತದೆ’ ಎಂದವರು ವಿವರಿಸಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ `ವಿಶೇಷವಾಗಿ ಭದ್ರತಾ ಹಾಗೂ ತಂತ್ರಮೂಲಕ ಪರಿಗಣನೆಗಳ ಹಿನ್ನೆಲೆಯಲ್ಲಿ ಭಾವಿಕೇರಿ ಗ್ರಾಮ ವ್ಯಾಪ್ತಿಯ ಭೂಮಿಯು NTPC ಯೋಜನೆ ಸ್ಥಾಪನೆಗೆ ಸೂಕ್ತವಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ ಅವರು ಹೇಳಿದ್ದಾರೆ.