177 ಕೋಟಿ ರೂ ವೆಚ್ಚದಲ್ಲಿ ಶಿರಸಿ-ಹಾವೇರಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಐದು ವರ್ಷಗಳಿಂದ ಆ ರಸ್ತೆ ಕೆಲಸ ಅರೆಬರೆಯಾಗಿದೆ. ಅತಿಯಾದ ಧೂಳು, ಹದಗೆಟ್ಟ ರಸ್ತೆ, ಚಕ್ರದ ಅಡಿ ಸಿಲುಕಿದ ಕಲ್ಲುಗಳ ಹಾರಾಟದಿಂದ ಜನ ಅಪಘಾತದ ಆತಂಕ ಎದುರಿಸುತ್ತಿದ್ದಾರೆ. ಜೊತೆಗೆ ಈ ಮಾರ್ಗದಲ್ಲಿ ಪ್ರಯಾಣಿಸಿದವರು ಆರೋಗ್ಯ ಸಮಸ್ಯೆಗೂ ಒಳಗಾಗಿದ್ದಾರೆ.
ನಿತ್ಯ ಸಾವಿರಾರು ವಾಹನಗಳು ಈ ಹೆದ್ದಾರಿ ಮೂಲಕ ಸಂಚರಿಸುತ್ತವೆ. ಪ್ರತಿ ವಾಹನ ಓಡಾಟದ ನಂತರವೂ ಆ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಧೂಳು ಏಳುತ್ತದೆ. ಇದರಿಂದ ಮುಂದೆ ಹೋದ ವಾಹನದ ಹಿಂದೆ ಬರುವ ಪ್ರಯಾಣಿಕರು ಉಸಿರಾಟ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೆದ್ದಾರಿ ಪಕ್ಕ ನಿಂತವರಿಗೆ `ಥೂ.. ಇವ್ರ ಜನ್ಮಕ್ಕಿಷ್ಟು, ಯೋಗ್ಯತೆಗಿಷ್ಟು, ಅಯೋಗ್ಯರು.. ನಾಲಾಯಕರು’ ಎಂದು ಪ್ರಯಾಣಿಕರು ರಾಜಕಾರಣಿಗಳಿಗೆ ಬೈಯುವ ಶಬ್ದಗಳು ಕೇಳಿಸುತ್ತಿವೆ. ಆದರೆ, ಆ ಬೈಗುಳ ಕೇಳಿಸಿದರೂ ರಾಜಕಾರಣಗಳು `ತಮಗೆ ಅದು ಸಂಬAಧಿಸಿಲ್ಲ’ ಎನ್ನುವ ರೀತಿ ಸುಮ್ಮನಿದ್ದಾರೆ. ಹೀಗಾಗಿ `ಅವರಿಗೆ ಎಷ್ಟು ಬೈದರೂ ಪ್ರಯೋಜನ ಇಲ್ಲ.. ಇವ್ರ ಯೋಗ್ಯತೆಯೇ ಇಷ್ಟು’ ಎಂದು ಜನ ಅದೇ ದಾರಿಯಲ್ಲಿ ಮುಂದೆ ಸಾಗುತ್ತಿದ್ದಾರೆ!
ಇಲ್ಲಿನ ನಾಲ್ಕರ ಕ್ರಾಸ್ನಿಂದ ಶಿರಸಿಯ ನಿಲೇಕಣಿವರೆಗೆ ಸುಮಾರು 38 ಕಿಲೋಮೀಟರ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಸಾಗರಮಾಲಾ ಯೋಜನೆ ಅಡಿ ಈ ಕಾಮಗಾರಿ ಮಾಡಲಾಗುತ್ತಿದ್ದು, ಬಳ್ಳಾರಿ ಮೂಲದ ಅಮ್ಮಾಪುರಂ ಕನ್ಸ್ಟ್ರಕ್ಷನ್ ಕಂಪನಿ ಈ ಕೆಲಸದ ಗುತ್ತಿಗೆಪಡೆದಿದೆ. ಆ ಕಂಪನಿ ಮತ್ತೊಂದು ಕಂಪನಿಗೆ ಉಪಗುತ್ತಿಗೆ ಕೊಟ್ಟು ಕೆಲಸ ಮಾಡಿಸುತ್ತಿದ್ದು, ಹೀಗಾಗಿ ಇಲ್ಲಿ ಕೆಲಸ ಮಾಡುವವರ ಮೇಲೆ ಯಾರಿಗೂ ಹಿಡಿತವಿಲ್ಲ. ಸದ್ಯ ಇಡೀ ರಸ್ತೆಯನ್ನು ಅಗೆಯಲಾಗಿದೆ. ಅಲ್ಲಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ರಾಶಿ ಹಾಕಿ ಕೆಲಸವನ್ನು ಸಹ ನಿಲ್ಲಿಸಲಾಗಿದೆ. ಇದರಿಂದ ಕಲ್ಲಿನ ಧೂಳು ಜನರ ಕಣ್ಣು-ಮೂಗು-ಬಾಯಿಗೆ ಬಡಿಯುತ್ತಿದೆ. ಇಲ್ಲಿನ ಧೂಳು ಹೇಗಿದೆ ಎಂದರೆ ಎದುರಿನಿಂದ ಬರುವ ವಾಹನ ಸಹ ಕಾಣುವುದಿಲ್ಲ!
ಚಿಪಗಿ, ಇಸಳೂರು, ಗೌಡಳ್ಳಿ ಸಣ್ಣಕೇರಿ, ಬಿಸಲಕೊಪ್ಪ ಭಾಗದಲ್ಲಿ ಹೆದ್ದಾರಿಗೆ ಡಾಂಬರ್ ಸಹ ಹಾಕಿಲ್ಲ. ಅಲ್ಲಲ್ಲಿ ಗುಡ್ಡ-ಮರ ಕಟಾವು ನಡೆಸಿ ಅಪಾಯಕಾರಿ ವಾತಾವರಣ ನಿರ್ಮಿಸಲಾಗಿದೆ. ಆ ಧೂಳು ತಿಂದ ಪ್ರಯಾಣಿಕರು ಕೆಮ್ಮು, ಉಸಿರಾಟ ತೊಂದರೆ, ಕಣ್ಣಿನ ಉರಿ, ಅಸ್ತಮಾದಂತಹ ಕಾಯಿಲೆಗೆ ಒಳಗಾಗಿದ್ದಾರೆ. ಉತ್ತಮ ಆಸ್ಪತ್ರೆಯೂ ಇಲ್ಲದ ಕಾರಣ ಚಿಕಿತ್ಸೆಗಾಗಿ ಬೇರೆ ಕಡೆ ಹೋಗುತ್ತಿದ್ದಾರೆ. ರಸ್ತೆ ಬದಿ ಮನೆ ಕಟ್ಟಿಕೊಂಡವರAತೂ ನಿತ್ಯ ನರಕ ಅನುಭವಿಸುತ್ತಿದ್ದಾರೆ.
`ಸಾರ್ವಜನಿಕ ಅಪಾಯ ಮತ್ತು ನಿರ್ವಹಣೆಯಲ್ಲಿ ನಿರ್ಲಕ್ಷಿಸಿದ ಶಿರಸಿ- ದಾಸನಕೊಪ್ಪ ರಾಷ್ಟಿಯ ಹೆದ್ದಾರಿ ಅಭಿವೃದ್ಧಿ ಪ್ರಾಧೀಕಾರ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಆಡಳಿತ ವ್ಯವಸ್ಥೆ ಅಥವಾ ಪೋಲೀಸ್ ಇಲಾಖೆ ಸ್ವಪ್ರೇರಣೆಯ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಆಗ್ರಹಿಸಿದ್ದಾರೆ. `ಭಾರತೀಯ ಸಂವಿಧಾನದ 21ನೇ ವಿಧಿ ಜೀವನದ ಹಕ್ಕು ಆಗಿರುವುದಲ್ಲದೇ, ಸುರಕ್ಷಿತ ಹಾಗೂ ಗುಂಡಿಗಳಿಲ್ಲದ ಸಂಚಾರಿ ಪೂರಕವಾದ ರಸ್ತೆಗಳ ಹಕ್ಕು ಮೂಲಭೂತ ಹಕ್ಕಾಗಿದೆ. ನಿರ್ಲಕ್ಷವಹಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ಜರುಗಿಸಲು ಅನೇಕ ಉಚ್ಛ ನ್ಯಾಯಾಲಯದ ತೀರ್ಪುಗಳಿವೆ’ ಎಂದವರು ಹೇಳಿದ್ದಾರೆ.