ಕುಮಟಾದಿoದ ಭಟ್ಕಳದ ಕಡೆ ಸಾಗುತ್ತಿದ್ದ ಸರ್ಕಾರಿ ಬಸ್ಸಿಗೆ ಶುಕ್ರವಾರ ಮುರುಡೇಶ್ವರದಲ್ಲಿ ಬೆಂಕಿ ತಗುಲಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರೀ ಪ್ರಮಾಣದ ಅನಾಹುತ ತಪ್ಪಿದೆ.
ಶುಕ್ರವಾರ ಮಧ್ಯಾಹ್ನ ಈ ಕೆಎಸ್‌ಆರ್‌ಟಿಸಿ ಬಸ್ಸು ಸಂಚರಿಸುತ್ತಿದ್ದು, ಅದರಲ್ಲಿ 23 ಪ್ರಯಾಣಿಕರಿದ್ದರು. ಮುರುಡೇಶ್ವರ ನಾಕ್ಕಿಯಿಂದ ಬಸ್ ನಿಲ್ದಾಣದತ್ತ ತೆರಳುವ ವೇಳೆ ಜನತಾ ವಿದ್ಯಾಲಯ ಸಮೀಪ ಬಸ್ಸಿನ ಮುಂದಿನ ಎಡ ಚಕ್ರ ಬಳಿ ಬೆಂಕಿ ಕಾಣಿಸಿತು. ಇದನ್ನು ಗಮನಿಸಿದ ಚಾಲಕ ಗಣಪತಿ ಚಿದಾನಂದ ಚೌಡಕಿ ಅವರು ತಕ್ಷಣ ಬಸ್ಸನ್ನು ನಿಲ್ಲಿಸಿದರು. ಪರಿಶೀಲನೆ ನಡೆಸುವಾಗ ಇಂಜಿನ್ ಭಾಗದಿಂದ ಹೊಗೆ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಚಾಲಕ ಹಾಗೂ ನಿರ್ವಾಹಕ ಶ್ರೀಪಾದ್ ಹನುಮಂತ್ ಮಡಿವಾಳ ಅವರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಕ್ಷಣ ಸುರಕ್ಷಿತವಾಗಿ ಕೆಳಗಿಳಿಸಿದರು.
ನಂತರ ಸ್ಥಳೀಯ,ಆಟೋ ಚಾಲಕ ಮಂಜುನಾಥ ಮೊಗೇರ, ಬಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು. ಭಟ್ಕಳ ಡಿಪೋದಿಂದ ಮೆಕಾನಿಕ್‌ಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿಯಂತೆ ಚಕ್ರದ ಲೈನರ್ ಜಾಮ್ ಆಗಿರುವುದೇ ಬೆಂಕಿಗೆ ಕಾರಣವಾಗಿದೆ.