ಹೊನ್ನಾವರ ಪ್ರಭಾತ ನಗರದ ಉವೈಜ್ ಬೋಗ್ಯಾ ಅವರು ಅಡ್ಡಾದಿಡ್ಡಿ ಬೈಕ್ ಓಡಿಸಿದ ಪರಿಣಾಮ ಆ ಬೈಕು ಗಣಪಿ ನಾಯ್ಕ ಅವರಿಗೆ ಗುದ್ದಿದೆ. ಆಸ್ಪತ್ರೆ ಸೇರುವ ಮುನ್ನವೇ ಗಣಪಿ ನಾಯ್ಕ ಅವರು ಸಾವನಪ್ಪಿದ್ದಾರೆ.
ಹೊನ್ನಾವರ ಮಾವಿನಕೂರ್ವಾದ ಸಾಲೆಹಿತ್ಲುವಿನಲ್ಲಿ ಗಣಪಿ ಮಂಜು ನಾಯ್ಕ (80) ಅವರು ವಾಸವಾಗಿದ್ದರು. ಕೃಷ್ಣ ನಾಯ್ಕ ಅವರು ಸೆಕ್ಯುರಿಟಿ ಕೆಲಸ ಮಾಡಿ ತಮ್ಮ ತಾಯಿ ಗಣಪಿ ನಾಯ್ಕ ಅವರನ್ನು ನೋಡಿಕೊಳ್ಳುತ್ತಿದ್ದರು. ಮಾರ್ಚ 31ರಂದು ಮಾವಿನಕೂರ್ವಾ ಹೊನ್ನಾವರ ರಸ್ತೆಯ ಸಾಲೆಹಿತ್ಲು ಗ್ರಾಮ ಒನ್ ಕೇಂದ್ರದ ಎದುರು ಹೇರೆಂಗಡಿಯ ಬಳಿ ನಡೆದ ಬೈಕ್ ಅಪಘಾತದಲ್ಲಿ ಗಣಪತಿ ನಾಯ್ಕ ಅವರು ಸಾವನಪ್ಪಿದರು.
ಆ ದಿನ ಪ್ರಭಾತ ನಗರದ ಉವೈಜ್ ಬಾಬೀರ ಬೋಗ್ಯಾ ಅವರು ರಿಯಾನ್ ರಫೀಕ್ ಮುಕ್ತೇಸರ್ ಅವರನ್ನು ಕೂರಿಸಿಕೊಂಡು ವೇಗವಾಗಿ ಬೈಕ್ ಓಡಿಸುತ್ತಿದ್ದರು. ಆ ಬೈಕು ವಲ್ಕಿಯಿಂದ ಹೊನ್ನಾವರದ ಕಡೆ ವೇಗವಾಗಿ ಬಂದ ಆ ಬೈಕು ಸಾಲೆಹಿತ್ಲುವಿನ ಗ್ರಾಮ ಒನ್ ಕೇಂದ್ರದ ಕಡೆ ಹೋಗುತ್ತಿದ್ದ ಗಣಪಿ ಮಂಜು ನಾಯ್ಕ ಅವರಿಗೆ ಡಿಕ್ಕಿ ಹೊಡೆಯಿತು. ಅಪಘಾತದ ರಭಸಕ್ಕೆ ಬೈಕಿನಲ್ಲಿದ್ದ ಇಬ್ಬರ ಜೊತೆ ನಡೆದು ಹೋಗುತ್ತಿದ್ದ ಗಣಪಿ ನಾಯ್ಕ ಅವರು ಸಹ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.
ಗಣಪಿ ನಾಯ್ಕ ಅವರಿಗೆ ಹೊನ್ನಾವರದಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಶರಾವತಿ ಸೇತುವೆ ಬಳಿಯೇ ಅವರು ಉಸಿರಾಟ ನಿಲ್ಲಿಸಿದರು. ವೇಗವಾಗಿ ಬೈಕ್ ಓಡಿಸಿ ವೃದ್ಧೆ ಸಾವಿಗೆ ಕಾರಣರಾದ ಉವೈಜ್ ಬೋಗ್ಯಾ ವಿರುದ್ಧ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.