ಸಿದ್ದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಹಜ ಹೆರಿಗೆಗೆ ಒಳಗಾಗಿದ್ದ ಬಾಣಂತಿಯೊಬ್ಬರು ತೀವೃ ರಕ್ತಸ್ರಾವದಿಂದ ಸಾವನಪ್ಪಿದ್ದಾರೆ. ಶಿವಮೊಗ್ಗದ ಮೆಗ್ಗಾನ್, ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಉನ್ನತ ಚಿಕಿತ್ಸೆ ಕೊಡಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಸಾಗರದ ಹೀರೇನೆಲ್ಲೂರಿನ ಸೋಮಪ್ಪ ಮಂಜಪ್ಪ ಅವರ ಪುತ್ರಿ ವನೀತಾ (27) ಅವರನ್ನು ಸಾಗರದ ಕೆ ಜಿ ಕೊಪ್ಪ ಭಾಗದ ಹರೀಶ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಎರಡನೇ ಮಗುವಿನ ಜನನಕ್ಕಾಗಿ ವನೀತಾ ಅವರು ಸಿದ್ದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಾರ್ಚ 30ರಂದು ಅವರಿಗೆ ಸಹಜ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ನಂತರ ವನೀತಾ ಅವರಿಗೆ ತೀವೃ ಪ್ರಮಾಣದಲ್ಲಿ ರಕ್ತಸ್ರಾವ ಶುರುವಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಸಹ ರಕ್ತಸ್ರಾವ ನಿಲ್ಲಿಸಲು ಸಾಧ್ಯವಾಗಲಿಲ್ಲ.
ಹೀಗಾಗಿ ವನೀತಾ ಅವರನ್ನು ಅದೇ ದಿನ ಉನ್ನತ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಮೂರು ದಿನ ಚಿಕಿತ್ಸೆಪಡೆದರೂ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ಹೀಗಾಗಿ ವನೀತಾ ಅವರನ್ನು ಮಣಿಪಾಲ್ ಕೆ ಎಂ ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವನೀತಾ ಅವರಿಗೆ ಎರಡು ಬಾರಿ ಅಧಿಕ ರಕ್ತದೊತ್ತಡ ಹೆಚ್ಚಾಗಿದ್ದು, ಅದಾದ ನಂತರ ಮೆದುಳಿನಲ್ಲಿ ರಕ್ತಸ್ರಾವ ಶುರುವಾಯಿತು. ಅದಕ್ಕೆ ಚಿಕಿತ್ಸೆಪಡೆ ವನೀತಾ ಅವರು ಏಪ್ರಿಲ್ 16ರಂದು ಅಲ್ಲಿಯೇ ಕೊನೆಯುಸಿರೆಳೆದರು.