ತಾಮ್ರದ ತಂತಿ ಆಸೆಗೆ ಬಿದ್ದ ಕಳ್ಳರು ಮುಂಡಗೋಡು ಪಟ್ಟಣದಲ್ಲಿ ಬಿಎಸ್‌ಎನ್‌ಎಲ್ ಕೇಬಲ್ ಕದ್ದಿದ್ದಾರೆ. ಪವರ್ ಪ್ಲಾಂಟ್’ಗೆ ಅಳವಡಿಸಿದ್ದ ಕೇಬಲ್ ಕಾಣೆಯಾಗಿದ್ದು, ಜ್ಯುನಿಯರ್ ಟೆಲಿಕಾಂ ಆಫಿಸರ್ ನಿತಿನ್ ಪ್ರಕಾಶ ಅವರು ಆ ಕೇಬಲ್ ಹುಡುಕಾಟ ನಡೆಸಿದ್ದಾರೆ.
ಮಾರ್ಚ 18ರ ರಾತ್ರಿ 8 ಗಂಟೆಯವರೆಗೂ ಅಲ್ಲಿ ಕೇಬಲ್ ಇರುವುದನ್ನು ಜನ ನೋಡಿದ್ದಾರೆ. ಮರುದಿನ ಬೆಳಗ್ಗೆ 6 ಗಂಟೆ ವೇಳೆಗೆ ಆ ಕೇಬಲ್ ಕಾಣೆಯಾಗಿದೆ. ಸುಮಾರು 70ಮೀಟರ್ ಉದ್ದದ ಕೇಬಲನ್ನು ಕಳ್ಳರು ಒಯ್ದಿದ್ದಾರೆ. ಆ ಕೇಬಲ್ ಒಳಗೆ 300ಚ.ಮೀ ತಾಮ್ರವಿದ್ದು ಅದರ ಮೌಲ್ಯ 70 ಸಾವಿರ ರೂಪಾಯಿಗಳಷ್ಟಿದೆ.
ಪವರ್ ಪ್ಲಾಂಟ್ ಬ್ಯಾಟರಿಗೆ ಅಳವಡಿಸಿದ್ದ ಕೇಬಲ್ ಕಾಣೆಯಾಗಿದನ್ನು ಅರಿತು ಯಲ್ಲಾಪುರ ಹಾಗೂ ಮುಂಡಗೋಡು ಬಿಎಸ್‌ಎನ್‌ಎಲ್ ಜ್ಯುನಿಯರ್ ಟೆಲಿಕಾಂ ಆಫಿಸರ್ ನಿತಿನ್ ಪ್ರಕಾಶ ಅವರು ಕಂಗಾಲಾಗಿದ್ದಾರೆ. ಎಲ್ಲಾ ಕಡೆ ಆ ಕೇಬಲ್ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಕೇಬಲ್ ಸಿಕ್ಕಿಲ್ಲ. ಅದನ್ನು ಕದ್ದವರ ಮಾಹಿತಿಯೂ ಗೊತ್ತಾಗಿಲ್ಲ.
ಹೀಗಾಗಿ ಕೇಬಲ್ ಕಳ್ಳರ ವಿರುದ್ಧ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ ನಿತಿನ್ ಅವರು ನಂತರ ಪೊಲೀಸರ ಮೊರೆ ಹೋಗಿದ್ದಾರೆ. ಸರ್ಕಾರಿ ಸ್ವತ್ತಾದ ಕೇಬಲ್ ಕದ್ದವರನ್ನು ಹುಡುಕಿ, ಕಠಿಣ ಕ್ರಮ ಜರುಗಿಸುವಂತೆ ಅವರು ಲಿಖಿತವಾಗಿ ತಿಳಿಸಿದ್ದಾರೆ. ಈ ಹಿನ್ನಲೆ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದು, ಕೇಬಲ್ ಕದ್ದವರ ಶೋಧ ಶುರು ಮಾಡಿದ್ದಾರೆ.