ಸ್ಮಶಾನ ಭೂಮಿಗೆ ಬೋರ್ಡ ಅಳವಡಿಸಿದ ಕಾರಣಕ್ಕಾಗಿ ಭಟ್ಕಳದಲ್ಲಿ ಹೊಡೆದಾಟ ನಡೆದಿದೆ. ತಲಗೇರಿಯ ಹರೀಶ ನಾಯ್ಕ ಅವರಿಗೆ ಮೂವರು ಸೇರಿ ಹೊಡೆದಿದ್ದಾರೆ.
ಭಟ್ಕಳದ ತಲಗೇರಿಯಲ್ಲಿ ಹರೀಶ ಸುಕ್ರಪ್ಪ ನಾಯ್ಕ (30) ಅವರು ವಾಸವಾಗಿದ್ದಾರೆ. ಕಟ್ಟಡ ಕಾರ್ಮಿಕರಾಗಿರುವ ಅವರು ಸೆಂಟ್ರಿAಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರ ಮೇಲೆ ಜಾಲಿ ದೇವಿ ನಗರದ ದಯಾನಂದ ಮಂಜುನಾಥ ನಾಯ್ಕ, ಸತೀಶ ಮಂಜುನಾಥ ನಾಯ್ಕ ಹಾಗೂ ಮಂಜುನಾಥ ತಿಮ್ಮಯ್ಯ ನಾಯ್ಕ ಅವರು ಮುಗಿ ಬಿದ್ದಿದ್ದಾರೆ. ಕಬ್ಬಿಣದ ಸಲಾಕೆಯಿಂದ ಹರೀಶ ನಾಯ್ಕ ಅವರಿಗೆ ಹೊಡೆದಿದ್ದಾರೆ.
ಏಪ್ರಿಲ್ 23ರಂದು ದೇವಿನಗರ ಕ್ರಾಸ್ ಬಳಿಯ ಸಂತೋಷ ನಾಗಪ್ಪ ನಾಯ್ಕ ಅವರ ಅಂಗಡಿ ಬಳಿ ಈ ಹೊಡೆದಾಟ ನಡೆದಿದೆ. ಹರೀಶ ನಾಯ್ಕ ಅವರು ತಮ್ಮ ಬೈಕ್ ಸರ್ವೀಸ್’ಗೆ ಕೊಟ್ಟು ಅಂಗಡಿ ಬಳಿ ನಿಂತಿರುವಾಗ ಆ ಮೂವರು ಆಗಮಿಸಿ ದಾಳಿ ಮಾಡಿದ್ದಾರೆ. ಜಾಲಿ ಪಂಚಾಯತಗೆ ಮಾಹಿತಿ ನೀಡದೇ ಹಿಂದೂ ರುದ್ರಭೂಮಿಗೆ ನಾಮಫಲಕ ಅಳವಡಿಸಿದ ವಿಷಯ ಹೊಡೆದಾಟಕ್ಕೆ ಕಾರಣ. `ರುದ್ರಭೂಮಿಯ ವಿಷಯ ಕೇಳಲು ನಿನಗೆ ಹಕ್ಕಿಲ್ಲ’ ಎಂದು ಹೇಳಿ ಆ ಮೂವರು ಹರೀಶ ನಾಯ್ಕ ಅವರಿಗೆ ಹೊಡೆದಿದ್ದಾರೆ.
ಕಬ್ಬಿಣದ ಸಲಾಕೆಯಿಂದ ಪೆಟ್ಟು ತಿಂದ ಹರೀಶ ನಾಯ್ಕ ಅವರು ದಯಾನಂದ ನಾಯ್ಕ, ಸತೀಶ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.