ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬನವಾಸಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೊಬ್ಬರು ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಅಧಿಕಾರವನ್ನು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಮೊಟಕುಗೊಳಿಸಿದೆ. ಬನವಾಸಿಯ ಕಾಂಗ್ರೆಸ್ ಘಟಕ ಅಧ್ಯಕ್ಷರಾಗಿದ್ದ ಸಿದ್ಧವೀರೇಶ ನರೇಗಲ್ ಅವರ ನೇಮಕಾತಿ ಆದೇಶವನ್ನು ಕಾಂಗ್ರೆಸ್ ಹಿಂಪಡೆದಿದೆ.
ಆರ್‌ಎಸ್‌ಎಸ್ ಹಾಗೂ ಕಾಂಗ್ರೆಸ್ ಸೈದ್ಧಾಂತಿಕವಾಗಿ ಬದ್ಧ ವಿರೋಧಿಯಾಗಿದ್ದರೂ ಆರ್ ಎಸ್ ಎಸ್ ಗಣವೇಶಧಾರಿಯಾಗಿದ್ದ ಸಿದ್ಧವೀರೇಶ ನರೇಗಲ್ ಅವರನ್ನು ಬನವಾಸಿ ಪಂಚಾಯತ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಬನವಾಸಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗಣಪತಿ ನಾಯ್ಕ ಅವರು ತಮ್ಮ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್‌ಗಳ ನೂತನ ಕಾಂಗ್ರೆಸ್ ಘಟಕದ ಅಧ್ಯಕ್ಷರ ಆಯ್ಕೆ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ ಸಿದ್ಧವೀರೇಶ ನರಗಲ್ ಅವರ ಹೆಸರಿತ್ತು. ಇದಕ್ಕೆ ಕಾಂಗ್ರೆಸ್ ವಲಯದಲ್ಲಿಯೇ ಅಸಮಧಾನವ್ಯಕ್ತವಾಗಿತ್ತು.
ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಹುದ್ದೆ ನೀಡಿದ ಕಾರಣ ಕಾಂಗ್ರೆಸಿಗರು ಗರಂ ಆಗಿದ್ದರು. ಈ ವಿಷಯ ಜಿಲ್ಲಾ ಕಾಂಗ್ರೆಸ್ ಸಮಿತಿ ಗಮನಕ್ಕೆ ಹೋಗಿದ್ದು, `ವರ್ಷಗಳ ಕಾಲ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದ ತಮ್ಮದೇ ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಈ ನೇಮಕಾತಿಯಲ್ಲಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂಬ ದೂರು ಸಲ್ಲಿಕೆಯಾಗಿತ್ತು. ಈ ಎಲ್ಲಾ ಹಿನ್ನಲೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಅವರು ಗಣಪತಿ ನಾಯ್ಕ ಅವರ ನೇಮಕಾತಿ ಆದೇಶವನ್ನು ರದ್ದು ಮಾಡಿದ್ದಾರೆ. `ಜಿಲ್ಲಾ ಸಮಿತಿಯ ಅನುಮೋದನೆಪಡೆಯದೇ ನೇಮಕಾತಿ ಮಾಡಿದ ಕಾರಣ ಈ ನಿರ್ಣಯ ಕೈಗೊಂಡಿರುವೆ’ ಎಂದವರು ಹೇಳಿದ್ದಾರೆ.