`ಕಡಲತೀರದಿಂದ ಎರಡು ಕಿಮೀ ದೂರದಲ್ಲಿ ಮೀನುಗಾರಿಕಾ ಚಟುವಟಿಕೆ ಕೈಗೊಳ್ಳುವ ಹಾಗಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆ ಸೂಚಿಸಿದ್ದು, ಇದಕ್ಕೆ ವಿರೋಧವ್ಯಕ್ತವಾಗಿದೆ. ಜಲಸಾಹಸ ಕ್ರೀಡೆ ನಡೆಸಲು ನೀಡಿದ ಟೆಂಡರಿನಲ್ಲಿ ಪ್ರವಾಸೋದ್ಯಮ ಇಲಾಖೆ ಈ ಬಗೆಯ ಸೂಚನೆ ನೀಡಿದ್ದು, ಗೋಕರ್ಣ-ಬೇಲೆಹಿತ್ತಲ-ದುಬ್ಬನಸಸಿ-ಗಂಗಾವಳಿ ಹಾಗೂ ಗಂಗೆಕೊಳ್ಳ ಭಾಗದ ಮೀನುಗಾರರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಶುಕ್ರವಾರ ಕುಮಟಾದ ಆಡಳಿತ ಸೌಧದಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಈ ಸೂಚನೆ ಪ್ರಸ್ತಾಪವಾಗಿದ್ದು, ಜನ ತಮ್ಮ ವಿರೋಧವ್ಯಕ್ತಪಡಿಸಿದರು. ಈ ಬಗೆಯ ಆದೇಶ ಹಿಂಪಡೆಯಬೇಕು ಎಂದು ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಆಗ್ರಹಿಸಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರದೀಪ ನಾಯಕ, ಮೀನುಗಾರರ ಮುಖಂಡರಾದ ಶಿವರಾಮ ಹರಿಕಂತ್ರ, ಜಗದೀಶ ಹರಿಕಂತ್ರ ಅವರು `ಎರಡು ಕಿಲೋಮೀಟರ್ ಸಮುದ್ರದವರೆಗೆ ಮೀನುಗಾರಿಕೆ ನಿಷೇಧ ಮಾಡುವುದರಿಂದ ಸಾಂಪ್ರದಾಯಿಕ ಮೀನುಗಾರಿಕೆ ಮಾಡುವವರಿಗೆ ಸಮಸ್ಯೆ ಆಗಲಿದೆ’ ಎಂದು ಸಭೆಗೆ ವಿವರಿಸಿದರು.
ಈ ವೇಳೆ ಶಾಸಕ ದಿನಕರ ಶೆಟ್ಟಿ ಮಾತನಾಡಿ `ಈ ವಿಷಯದ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಪ್ರತ್ಯೇಕ ಸಭೆ ಮಾಡೋಣ’ ಎಂದು ಸಲಹೆ ನೀಡಿದರು. `ಈ ರೀತಿ ನಿಷೇಧ ಹೇರುವ ಅಧಿಕಾರ ಪ್ರವಾಸೋದ್ಯಮ ಇಲಾಕೆಗೆ ಇಲ್ಲ. ಈಗಾಗಲೆ ಹೊರಡಿಸಿದ ಆದೇಶದವನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವೆ’ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಜಲಸಾಹಸ ಕ್ರೀಡೆ ನಡೆಸಲು ಟೆಂಡರ್‌ಪಡೆದವರು ಸಭೆಗೆ ಆಗಮಿಸಿ `ಯಾವುದೇ ನ್ಯೂನ್ಯತೆಗಳಿಲ್ಲದಿದ್ದರೂ ಏಕಾಎಕಿ ಟೆಂಡರ್ ರದ್ದುಪಡಿಸಿದರೆ ತಮಗೆ ಅನ್ಯಾಯವಗುತ್ತದೆ’ ಎಂದು ಹೇಳಿದರು.