`ಇಂಗ್ಲಿಷ್ ಔಷಧಿ ಸೇವನೆಯಿಂದ ತಾತ್ಕಾಲಿಕವಾಗಿ ರೋಗ ವಾಸಿಯಾದರೂ ಕೆಲ ದಿನದ ನಂತರ ಮತ್ತೆ ಆ ರೋಗ ಮರುಕಳಿಸುವ ಸಾಧ್ಯತೆಯಿದೆ. ಆದರೆ, ಹೋಮಿಯೋಪತಿ ಚಿಕಿತ್ಸೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೇ ರೋಗವನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿದೆ’ ಎಂದು ನಿವೃತ್ತ ಎಸೈ ಶಿವಾನಂದ ನಾಯ್ಕ ಅವರು ಹೇಳಿದ್ದಾರೆ.
ಅಂಕೋಲಾದ ಆಯುಷ್ ಹೋಮಿಯೋಪತಿ ಕ್ಲಿನಿಕ್‌ನಲ್ಲಿ ಹೋಮಿಯೋಪತಿ ಸಂಸ್ಥಾಪಕ ಫ್ರೆಡ್ರಿಚ್ ಸಾಮ್ವೆಲ್ ಹಾನಿಮ್ಯಾನ್ ಅವರ 271ನೇ ಜನ್ಮ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು `ತ್ವರಿತವಾಗಿ ಗುಣಮುಖರಾಗಲು ಅನೇಕರು ಇಂಗ್ಲಿಷ್ ಔಷಧಿಯ ಮೊರೆ ಹೋಗುತ್ತಾರೆ. ಆಕರ್ಷಕ ಜಾಹೀರಾತು ನೋಡಿ ಆಯುರ್ವೇದ ಹೆಸರಿನಲ್ಲಿ ಸಿಗುವ ನಕಲಿ ಔಷಧಿಗಳನ್ನು ಜನ ಬಳಸುತ್ತಿರುವುದು ಆತಂಕಕಾರಿ. ಅಂಥವು ಆರೋಗ್ಯಕ್ಕೆ ಸಹ ಹಾನಿಕಾರಕ’ ಎಂದು ಎಚ್ಚರಿಸಿದರು. `ಹೋಮಿಯೋಪತಿ ಚಿಕಿತ್ಸೆಯಿಂದ ನನ್ನ ಮೂತ್ರಪಿಂಡದ ಕಲ್ಲು ಸಮಸ್ಯೆ ನಿವಾರಣೆಯಾಗಿದೆ. ನನ್ನ ಪತ್ನಿಯ ಮಂಡಿ ನೋವು ಕಡಿಮೆಯಾಗಿದ್ದು, ಅವರ ಆರೋಗ್ಯದಲ್ಲೂ ಗಣನೀಯ ಸುಧಾರಣೆ ಕಂಡುಬAದಿದೆ’ ಎಂದು ಅನುಭವ ಹಂಚಿಕೊAಡರು.
ಆಯುಷ್ ಹೋಮಿಯೋಪತಿ ಕ್ಲಿನಿಕ್ ವೈದ್ಯೆ ಡಾ ಮಧುರಾ ನಾಯಕ ಅವರು ಮಾತನಾಡಿ `ಹೋಮಿಯೋಪತಿಯಲ್ಲಿ ನೀಡುವ ಬಿಳಿ ಗುಳಿಗೆಗಳು ಮೇಲ್ನೋಟಕ್ಕೆ ಒಂದೇ ರೀತಿ ಕಂಡರೂ ಪ್ರತಿ ರೋಗಿಯ ಸಮಸ್ಯೆಗೆ ಹಾಗೂ ರೋಗದ ಗುಣಲಕ್ಷಣಕ್ಕೆ ಅನುಗುಣವಾಗಿ ಅವುಗಳಲ್ಲಿ ಬಳಸುವ ಔಷಧೀಯ ಅಂಶಗಳು ಬೇರೆ ಬೇರೆಯಾಗಿರುತ್ತವೆ’ ಎಂದು ತಿಳಿಸಿದರು. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಾತನಾಡಿ `ಪುರಾತನ ವೈದ್ಯ ಪದ್ಧತಿಯಾದ ಹೋಮಿಯೋಪತಿಯು ಅತ್ಯಂತ ಸುರಕ್ಷಿತ’ ಎಂದರು. ಈ ಶಿಬಿರದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಸಲಾಯಿತು. ರಿಯಾಯಿತಿ ದರದಲ್ಲಿ ಔಷಧ ಮಾರಾಟ ನಡೆಯಿತು. ಕಾರ್ಯಕ್ರಮದಲ್ಲಿ ಶಿಲ್ಪಾ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.