ಹೊನ್ನಾವರಕ್ಕೆ ಹೋಗಿದ್ದ ದಾಂಡೇಲಿಯ ಮುಜಾಫರ್ ಶೇಖ್ ಅವರು ಅಲ್ಲಿನ ಎಆರ್‌ಎಂ ಸೂಪರ್ ಮಾರ್ಟಿಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಹೊಟೇಲ್ ಕೆಲಸ ಮಾಡಿಕೊಂಡಿದ್ದ ಮಜಾಫರ್ ಶೇಖ್ ಕುಮಟಾದ ಸೀತಾರ ಹೊಟೇಲ್ ಎದುರು ಸಿಕ್ಕಿಬಿದ್ದಿದ್ದು, ಕಳ್ಳತನದ ಹಾದಿ ಹಿಡಿದ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ಏಪ್ರಿಲ್ 16ರಂದು ಹೊನ್ನಾವರದ ಬಸ್ ನಿಲ್ದಾಣ ಸಮೀಪ ಕಳ್ಳತನ ನಡೆದಿತ್ತು. ಇಲ್ಲಿನ ಎಆರ್‌ಎಂ ಸೂಪರ್ ಮಾರ್ಟ ಬಂದ್ ಆದ ನಂತರ ದಾಂಡೇಲಿ ಸುಭಾಷನಗರದ ಮುಜಾಫರ್ ಮಹಮದ್ ಸಾಬ್ ಶೇಖ್ ಅವರು ಒಳಗೆ ನುಗ್ಗಿದ್ದರು. ಗಾಜು ಒಡೆದು ಒಳಗೆ ಪ್ರವೇಶಿಸಿದ ಮುಜಾಫರ್ ಶೇಖ್ ಅವರು ಸೂಪರ್ ಮಾರ್ಟಿನ ಎಲ್ಲಾ ಕಡೆ ಜಾಲಾಡಿದ್ದರು. ಅಲ್ಲಿದ್ದ ಹಣ ಹಾಗೂ ಎನ್ ವಿ ಆರ್ ದೋಚಿ ಪರಾರಿಯಾಗಿದ್ದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ್ ಬಿ ಸೇರಿ 48 ಗಂಟೆಯೊಳಗೆ ಆ ಕಳ್ಳನನ್ನು ಹಿಡಿಯುವ ಶಪಥ ಮಾಡಿದರು. ಅದರಂತೆ ಯೋಜನೆ ರೂಪಿಸಿ ತಂಡ ರಚಿಸಿದ ಪೊಲೀಸರು, ಹೊನ್ನಾವರ ಪಿಐ ಸಿದ್ದರಾಮೇಶ್ವರ ಎಸ್ ಅವರಿಗೆ ಸಂಪೂರ್ಣ ಜವಾಬ್ದಾರಿ ಕೊಟ್ಟರು. ಪಿಸೈ ಮಹಂತೇಶ ವಾಲ್ಮೀಕಿ, ಮಂಜುನಾಥ, ಬೆರಳೆಚ್ಚು ವಿಭಾಗದ ಪಿಐ ರಾಘವೇಂದ್ರ, ಪೊಲೀಸ್ ಸಿಬ್ಬಂದಿ ಲಿಂಗಜ್ಜ, ಸುಬ್ರಹ್ಮಣ್ಯ ಪಟಗಾರ, ರವಿ ನಾಯ್ಕ, ವಿನಾಯಕ ದುರ್ಗದ್ ಸೇರಿ ಕಾರ್ಯಾಚರಣೆ ನಡೆಸಿದರು.
ಕುಮಟಾ ಸೀತಾರ ಹೊಟೇಲ್ ಎದುರು ಆರೋಪಿ ಸಿಕ್ಕಿಬಿದ್ದಿದ್ದು, ಪೊಲೀಸರು ಮುಜಾಫರ್ ಶೇಖ್ ಅವರಿಂದ ಸತ್ಯ ಬಾಯ್ಬಿಡಿಸಿದರು. ಕಳ್ಳತನ ಮಾಡಿರುವುದು ಖಚಿತವಾದ ಹಿನ್ನಲೆ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಜೈಲಿನ ದಾರಿ ತೋರಿಸಿದರು.