ನಿರುದ್ಯೋಗ, ಮೀನುಗಾರರು ಅನುಭವಿಸುತ್ತಿರುವ ಸಮಸ್ಯೆ, ಮೂಲಭೂತ ಸೌಕರ್ಯದ ಕೊರತೆ ಹಾಗೂ ಕೈಗಾ ಹಾಗೂ ಸೀಬರ್ಡ ನೌಕಾನೆಲೆಯಿಂದ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗೋವಾದ ಪರ್ತಗಾಳಿ ಮಠದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರು ಕಳವಳವ್ಯಕ್ತಪಡಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿ, ನ್ಯಾಯ ಕೊಡಿಸಲು ಪ್ರಯತ್ನಿಸುವಂತೆ ಸ್ವಾಮೀಜಿ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರಿಗೆ ಸೂಚಿಸಿದ್ದಾರೆ.
ಶುಕ್ರವಾರ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಅವರನ್ನು ಮಾಧವ ನಾಯಕ ಅವರು ಭೇಟಿ ಮಾಡಿದ್ದಾರೆ. ಈ ವೇಳೆ ಕಾರವಾರದ ಜನ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಧವ ನಾಯಕ ಅವರು ಶ್ರೀಗಳಲ್ಲಿ ವಿವರಿಸಿದ್ದಾರೆ. ತಾವು ನಡೆದು ಬಂದ ದಾರಿ, ಹೋರಾಟದ ಬಗ್ಗೆಯೂ ಮಾಧವ ನಾಯಕ ಅವರು ತಿಳಿಸಿದ್ದಾರೆ. ಕಾರವಾರ ಭಾಗದ ಜನರ ಪ್ರಸ್ತುತ ಸ್ಥಿತಿಗತಿಗಳು, ಮೀನುಗಾರಿಕೆ ವಲಯದ ಸವಾಲುಗಳು, ನಿರುದ್ಯೋಗ ಸಮಸ್ಯೆ ಹಾಗೂ ಸ್ಥಳೀಯರು ಎದುರಿಸುತ್ತಿರುವ ಇತರ ಮೂಲಭೂತ ಸಮಸ್ಯೆಗಳ ಬಗ್ಗೆ ಅವರು ಸ್ವಾಮೀಜಿಗಳಿಗೆ ಮಾಹಿತಿ ನೀಡಿದ್ದಾರೆ. ಕೈಗಾ ವಿದ್ಯುತ್ ಅಣುಸ್ಥಾವರ, ಸೀಬರ್ಡ್ ನೌಕಾನೆಲೆಗಳಲ್ಲಿ ಸ್ಥಳೀಯರಿಗೆ ತಕ್ಕಮಟ್ಟಿಗೆ ಉದ್ಯೋಗ ಸಿಗದೇ ಇರುವುದರಿಂದ ಆದ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ. ಈ ಎಲ್ಲಾ ಮಾಹಿತಿಪಡೆದ ಶ್ರೀಗಳು ಮಾಧವ ನಾಯಕ ಅವರನ್ನು ಆಶೀರ್ವದಿಸಿ, ಹೋರಾಟಕ್ಕೆ ಸ್ಪೂರ್ತಿ ತುಂಬಿದ್ದಾರೆ.
ಆಧ್ಯಾತ್ಮಿಕ ಕ್ಷೇತ್ರದ ಬಗ್ಗೆಯೂ ಮಾತನಾಡಿದ ಶ್ರೀಗಳು `ನೈಜ ಆಧ್ಯಾತ್ಮಿಕ ಜ್ಞಾನ ಸಮಾಜಕ್ಕೆ ಉಪಕಾರಿಯಾಗಿರುತ್ತದೆ. ಆಧ್ಯಾತ್ಮಿಕ ಚಿಂತನೆಯಿರುವವರು ಸಾಮಾಜಿಕ ಕಳಕಳಿ ಮೂಲಕ ಹೊರಾಟ ನಡೆಸಿದರೆ ಅದಕ್ಕೆ ಯಶಸ್ಸು ಸಿಗುತ್ತದೆ’ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾಧವ ನಾಯಕ ಅವರು `ತಮ್ಮ ಪ್ರವಚನಗಳನ್ನು ಆಲಿಸಿದ ನಂತರ ಅದ್ಭುತ ಜ್ಞಾನದ ಪರಿಚಯವಾಯಿತು. ತಮ್ಮ ವೈಚಾರಿಕತೆ ಮತ್ತು ಚಿಕ್ಕ ವಯಸ್ಸಿನಲ್ಲಿ ಅಪಾರ ಪಾಂಡಿತ್ಯವನ್ನು ಕಂಡು ಸ್ವತಃ ಭೇಟಿಯಾಗಲು ಆಗಮಿಸಿದ್ದೇನೆ’ ಎಂದರು. ಮಾಧವ ನಾಯಕ ಅವರ ಪತ್ನಿ ಸ್ನೇಹಾ, ಮಗಳು ಯಶಸ್ವಿನಿ ಅವರಿಗೂ ಫಲ ಮಂತ್ರಾಕ್ಷತೆ ನೀಡಿ ಶ್ರೀಗಳು ಆಶೀರ್ವದಿಸಿದರು.