ಸಿದ್ದಾಪುರದಲ್ಲಿ ಯುವತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಇದರ ಹಿಂದೆ `ಲವ್ ಜಿಹಾದ್’ ಆರೋಪ ಕೇಳಿಬಂದಿದೆ. `ಮುಸ್ಲೀಂ ಯುವಕನೊಬ್ಬ ತನ್ನ ಧರ್ಮ ಮರೆಮಾಚಿ ಯುವತಿಯನ್ನು ಪ್ರೀತಿಸಿದ್ದು, ನಂತರ ನೀಡಿದ ಮಾನಸಿಕ ಹಿಂಸೆಯೇ ಆಕೆಯ ಆತ್ಮಹತ್ಯೆಗೆ ಕಾರಣ’ ಎಂದು ಆರೋಪಿಸಿ ಪ್ರತಿಭಟನೆಯೂ ನಡೆದಿದೆ.
ಬಿಜೆಪಿ ಮಂಡಳದಿAದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆದಿದ್ದು, `ಇದನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಸಿದೇ ಸಮಗ್ರ ತನಿಖೆ ನಡೆಸಬೇಕು’ ಎಂದು ಪ್ರಮುಖರು ಆಗ್ರಹಿಸಿದ್ದಾರೆ. `ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಪ್ರತಿಭಟನಾಕಾರರು ಧರಣಿ ನಡೆಸಿದ್ದಾರೆ.
`ಯುವಕನೊಬ್ಬ ತನ್ನನ್ನು ಹಿಂದೂ ಎಂದು ನಂಬಿಸಿ ಯುವತಿಯನ್ನು ಪ್ರೀತಿಸಿದ್ದು, ನಂತರ ಯುವತಿಗೆ ಸತ್ಯ ಗೊತ್ತಾಗಿದೆ. ಯುವಕನ ಹಿಂಸೆ ಸಹಿಸದೇ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಒಂದು ವಾರ ಮುಂಚೆ ಕುಟುಂಬದವರಿಗೆ ಆ ಯುವಕನ ಬಗ್ಗೆ ಗೊತ್ತಾಗಿದ್ದು, ಆತ್ಮಹತ್ಯೆ ನಡೆದು ಹಲವು ದಿನ ಕಳೆದರೂ ಮರಣೋತ್ತರ ವರದಿ ಬಂದಿಲ್ಲ’ ಎಂದು ಬಿಜೆಪಿ ಸಿದ್ದಾಪುರ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ ಕೆ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.
`ಹಿಂದೂ ಸಂಘಟನೆಯವರು ಈ ಬಗ್ಗೆ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತನಿಖೆ ದಾರಿ ತಪ್ಪಿಸುವ ಪ್ರಯತ್ನ ನಡೆದಿದೆ’ ಎಂದು ಬಿಜೆಪಿಗರು ಕಿಡಿಕಾರಿದ್ದಾರೆ. `ಪೊಲೀಸರು ಈವರೆಗೂ ಆರೋಪಿ ಯುವಕನ ಫೋನ್ ಕಾಲ್ ಪರಿಶೀಲಿಸಿಲ್ಲ. ಆತನ ವಿಚಾರಣೆ ನಡೆಸಿಲ್ಲ. ಹೀಗಾಗಿ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗಿದೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಒಂದು ವಾರದಲ್ಲಿ ಆರೋಪಿ ಬಂಧನ ಆಗದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.