ರೇಖಾ ಭಟ್ಟ ಕೋಟೆಮನೆ ಅವರ ಮುಂದಾಳತ್ವದಲ್ಲಿ ಯಲ್ಲಾಪುರದ ಹೀರೆಸರದ ಬಳಿ ಮಹಿಳೆಯರೇ ಸೇರಿ ಮನಸ್ವಿನಿ ಎಂಬ ವಿದ್ಯಾ ಸಂಸ್ಥೆ ಕಟ್ಟಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿರುವ ಈ ಶಿಕ್ಷಣ ಸಂಸ್ಥೆ ಗುರುಕುಲ ಪದ್ಧತಿಯಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿದೆ.
`ಇಲ್ಲಿ ಮನೆಯಲ್ಲಿ ಕನ್ನಡ ಮಾತನಾಡುವವರಿಗೂ ಆಂಗ್ಲ ಮಾಧ್ಯಮದಲ್ಲಿ ಅರ್ಥವಾಗುವ ರೀತಿ ಶಿಕ್ಷಣ ನೀಡಲಾಗುತ್ತದೆ.ಪೂರ್ವ ಪ್ರಾಥಮಿಕದಿಂದ ಶುರುವಾಗಿ ಪ್ರೌಢ ಶಿಕ್ಷಣದವರೆಗೆ ಒಂದೇ ಸೂರಿನಲ್ಲಿ ಶಿಕ್ಷಣ ನೀಡಲಾಗುತ್ತದೆ. ಹಳ್ಳಿಯ ವಾತಾವರಣದಲ್ಲಿ ಶಾಲೆಯಿರುವುದರಿಂದ ವಾಹನಗಳ ಓಡಾಟ ಇಲ್ಲ. ಹೀಗಾಗಿ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಪಡಬೇಕಾಗಿಲ್ಲ. ಬೇರೆ ಬೇರೆ ಶಾಲೆಗಳ ಹಾಗೇ ಇಲ್ಲಿ ಶುಲ್ಕ ಪಾವತಿಗಾಗಿ ಮಕ್ಕಳ ಮೇಲೆ ಒತ್ತಡ ಹಾಕುವುದಿಲ್ಲ’ ಎಂದು ಮುಖ್ಯಾಧ್ಯಾಪಕಿ ಸವಿತಾ ಭಟ್ಟ ಅವರು ಮಾಹಿತಿ ನೀಡಿದ್ದಾರೆ.
`2018-19ನೇ ಸಾಲಿನಲ್ಲಿ 10 ಮಕ್ಕಳಿಂದ ಶುರುವಾದ ಈ ಶಾಲೆಯಲ್ಲಿ ಸದ್ಯ 130 ಮಕ್ಕಳಿದ್ದಾರೆ. ಮೊದಲು ಬಾಡಿಗೆ ಕಟ್ಟದಲ್ಲಿ ಶಾಲೆ ಶುರು ಮಾಡಿದ್ದು, ಇದೀಗ ಸ್ವಂತ ಜಾಗದಲ್ಲಿ ಸುಂದರ ಕಟ್ಟಡ ನಿರ್ಮಿಸಿ ಕಲಿಕೆ ಮುಂದುವರೆಸಲಾಗಿದೆ. ಹಳ್ಳಿ ಮಕ್ಕಳ ಅನುಕೂಲಕ್ಕೆ ಶಾಲೆಯವರೆಗೆ ವಾಹನ ವ್ಯವಸ್ಥೆ ಮಾಡಲಾಗಿದೆ. ಈ ವರ್ಷ ಯಲ್ಲಾಪುರ ಪಟ್ಟಣದಲ್ಲಿಯೂ ಶಾಲಾ ವಾಹನ ಸಂಚಾರ ನಡೆಯಲಿದೆ’ ಎಂದವರು ವಿವರಿಸಿದರು. `ಚವತ್ತಿ, ಕಾತೂರುವರೆಗೆ ವಾಹನ ಓಡಾಟ ಮೊದಲಿನಿಂದಲೂ ಇದೆ. ಇದರಿಂದ ಆ ಭಾಗದ ಅನೇಕ ಮಕ್ಕಳಿಗೆ ಅನುಕೂಲವಾಗಿದೆ’ ಎಂದರು.
`ಈ ಶಾಲೆಯಲ್ಲಿ ವಾರಕ್ಕೆ ಎರಡು ದಿನ ಅಭಾಕಾಸ್, ತಬಲಾ, ಸಂಗೀತ ತರಗತಿ ನಡೆಸಲಾಗುತ್ತದೆ. ಇಲ್ಲಿನ ಎಲ್ಲಾ ಶಿಕ್ಷಕರು ಮಹಿಳೆಯರೇ ಆಗಿದ್ದು, ಪ್ರತಿ ಮಗುವಿನ ಬಗ್ಗೆ ವೈಯಕ್ತಿಕ ಕಾಳಜಿವಹಿಸುತ್ತಾರೆ. ಹೀಗಾಗಿ ಮನೆಯ ವಾತಾವರಣದಲ್ಲಿ ಶಿಕ್ಷಣಪಡೆಯಲು ಸಾಧ್ಯವಿದೆ’ ಎಂದು ರೇಖಾ ಭಟ್ಟ ಕೋಟೆಮನೆ ಅವರು ಹೇಳಿದರು. `ನೃತ್ಯ, ಗಾಯನದ ಜೊತೆ ಭಗವದ್ಘೀತೆ ಬಗ್ಗೆಯೂ ಇಲ್ಲಿ ಕಲಿಸಲಾಗುತ್ತದೆ. ಪ್ರತಿ ದಿನ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿ, ಜೀವನ ಮೌಲ್ಯಗಳ ಬಗ್ಗೆ ವಿವರಿಸಲಾಗುತ್ತದೆ’ ಎಂದರು.
`ಮನಸ್ವಿನಿ ವಿದ್ಯಾಲಯದಿಂದ ಹಾಸ್ಟೇಲ್ ಸೌಲಭ್ಯವನ್ನು ಮಾಡಿಕೊಡಲಾಗಿದೆ. ಸದ್ಯ 12 ಮಕ್ಕಳು ಹಾಸ್ಟೇಲಿನಲ್ಲಿದ್ದು, ಶಿಕ್ಷಣಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ ಬರಲಿದೆ’ ಎಂಬ ಮಾಹಿತಿ ನೀಡಿದರು. ಪ್ರಮುಖರಾದ ಮಂಜುನಾಥ ಹೆಗಡೆ, ಪ್ರಶಾಂತ ಹೆಗಡೆ, ಸದಾನಂದ ಮೊಗೇರ ಇದ್ದರು.