ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಿರುವ ಶಿರಸಿಯ ಮಂಜುಗುಣಿಯಲ್ಲಿ ಅದೇ ಪ್ರಮಾಣದಲ್ಲಿ ತ್ಯಾಜ್ಯ ಬೀಳುತ್ತಿದ್ದು, ಕೂರ್ಸೆಯ ಅರವಿಂದ ಹೆಗಡೆ ಅವರು ಸ್ವ ಖುಷಿಯಿಂದ ಆ ತ್ಯಾಜ್ಯ ಆರಿಸುವ ಕಾಯಕದಲ್ಲಿ ತೊಡಗಿದ್ದಾರೆ. `ಸ್ವಚ್ಚತೆ ಕಾಪಾಡುವುದು ಸಹ ದೇವರೆ ಸೇವೆ’ ಎಂದು ನಂಬಿ ಅವರು ಶ್ರೀ ಕ್ಷೇತ್ರದ ಪರಿಸರ ರಕ್ಷಣೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ.
ಅರವಿಂದ ಹೆಗಡೆ ಅವರು ಶಿರಸಿ ಮಂಜುಗುಣಿ ಸಮೀಪದ ಕೂರ್ಸೆ ಎಂಬ ಊರಿನವರು. ಕೃಷಿಕರಾಗಿ ಬದುಕು ಕಟ್ಟಿಕೊಂಡಿರುವ ಅವರು ಅನೇಕರ ಪಾಲಿಗೆ ಆಪತ್ಬಾಂದವರಾಗಿದ್ದಾರೆ. ಯಾವುದೇ ಪ್ರಚಾರ, ಲಾಭದ ನಿರೀಕ್ಷೆಯಿಲ್ಲದೇ ತಮ್ಮ ಪಾಡಿಗೆ ತಾವು ಜನ ಸೇವೆ ಮಾಡುತ್ತಿದ್ದಾರೆ. ಊರಿನಲ್ಲಿ ಯಾರಿಗೆ ಕಷ್ಟ ಎಂದರೂ ಅಲ್ಲಿಗೆ ಅರವಿಂದ ಹೆಗಡೆ ಅವರು ಹೋಗಿ ತಮ್ಮ ಕೈಲಾದ ರೀತಿ ನೆರವು ನೀಡುತ್ತಾರೆ. ಮಂಜುಗುಣಿ ರಥೋತ್ಸವದ ಹಿನ್ನಲೆ ಭಕ್ತಿಯಿಂದ ಶ್ರೀಕ್ಷೇತ್ರಕ್ಕೆ ಆಗಮಿಸಿದ ಅವರು ಅಲ್ಲಿಯೂ ತಮ್ಮ ಸೇವಾ ಚಟುವಟಿಕೆಯನ್ನು ಮುಂದುವರೆಸಿದ್ದಾರೆ.
ರಥೋತ್ಸವದಲ್ಲಿ ಭಾಗವಹಿಸಲು ಮಂಜುಗುಣಿಗೆ ಆಗಮಿಸಿದ್ದ ಅರವಿಂದ ಹೆಗಡೆ ಅವರಿಗೆ ಅಲ್ಲಿನ ಪರಿಸರದಲ್ಲಿ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಕಾಣಿಸಿತು. ಬಂದ ಭಕ್ತರೆಲ್ಲರೂ ಎಲ್ಲೆಂದರಲ್ಲಿ ಕಸ ಎಸೆಯುವುದುನ್ನು ನೋಡಿದ ಅವರು ಭಕ್ತರ ಮುಂದೆಯೇ ಕಸಗಳನ್ನು ಆರಿಸುವ ಮೂಲಕ ಅವರಲ್ಲಿ ಅರಿವು ಮೂಡಿಸಿದರು. ಬಿಳಿ ಅಂಗಿ-ಲುoಗಿ ಧರಿಸಿ ಆಗಮಿಸಿದ ಅರವಿಂದ ಹೆಗಡೆ ಅವರು ಅದೇ ಧರಿಸಿನಲ್ಲಿ ಅಲ್ಲಿನ ಪರಿಸರ ಸ್ವಚ್ಚತೆಯ ಬಗ್ಗೆ ಕಾಳಜಿವಹಿಸಿದರು. ಕಸ ಎಸೆದವರನ್ನು ಸಹ ದೂಷಿಸದೇ, ಆ ಬಗ್ಗೆ ಯಾರನ್ನು ದೂರದೇ, ಯಾರನ್ನು ಪ್ರಶ್ನಿಸದೇ ಅವರು ಆ ಕಸ ಆರಿಸುವ ಕಾಯಕ ನಡೆಸಿದರು.
ಮಂಜುಗುಣಿಯ ರಥೋತ್ಸವದ ವೇಳೆ ಸಾವಿರ ಸಂಖ್ಯೆಯ ಭಕ್ತರು ಆಗಮಿಸಿದ್ದು, ಸ್ವಚ್ಚತೆ ಬಗ್ಗೆ ಕಾಳಜಿವಹಿಸಿ ಅವರೆಲ್ಲರಿಗೂ ಅರವಿಂದ ಹೆಗಡೆ ಅವರು ಪ್ರೇರಣೆಯಾದರು. ಬಿಸಿಲಿನಲ್ಲಿಯೂ ಸಹ ಅವರು ವಿರಾಮಪಡೆಯದೇ ತಮ್ಮ ಕಾಯಕ ಮುಂದುವರೆಸಿದರು. ರಥ ಎಳೆಯುವ ಮುನ್ನ ಪರಿಸರ ಸ್ವಚ್ಚಗೊಳಿಸಿದ ಅರವಿಂದ ಹೆಗಡೆ ಅವರು ರಥ ಎಳೆದ ನಂತರವೂ ಅಲ್ಲಿ ಬಿದ್ದಿದ್ದ ತ್ಯಾಜ್ಯಗಳನ್ನು ಆರಿಸಿ ಕಸದ ಡಬ್ಬಿ ತುಂಬಿಸಿದರು. ಆ ಭಾಗದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ ಹಾಗೂ ಇನ್ನಿತರ ಕಸಗಳನ್ನು ವೈಜ್ಞಾನಿಕ ವಿಲೇವಾರಿ ಮಾಡಲು ಅರವಿಂದ ಹೆಗಡೆ ಅವರು ತಮ್ಮದೇ ಆದ ಕೊಡುಗೆ ನೀಡಿದರು.