ಕುಮಟಾದ ಕಗಾಲದ ಮಣಿಕಂಠ ಗೌಡ ಅವರ ಜೊತೆ ಸೇರಿ ನಿತ್ಯಾನಂದ ನಾಯ್ಕ ಅವರು ಅಡ್ಡದಾರಿ ಹಿಡಿದಿದ್ದಾರೆ. ಅವರಿಬ್ಬರು ದುಶ್ಚಟದ ದಾಸರಾಗಿ ತಮ್ಮ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ.
ಕುಮಟಾದ ಕಗಾಲ ಬಳಿಯಿರುವ ಗೌಡರಕೇರಿಯಲ್ಲಿ ಮಣಿಕಂಠ ನಾರಾಯಣ ಗೌಡ ಅವರು ವಾಸವಾಗಿದ್ದಾರೆ. 24 ವರ್ಷದ ಅವರು ಚಾಲಕರಾಗಿ ಜೀವನ ನಡೆಸುತ್ತಿದ್ದು, ಕಗಾಲ ಸೊಸೈಟಿ ಹತ್ತಿರ ವಾಸವಾಗಿರುವ ನಿತ್ಯಾನಂದ ಹರಿ ನಾಯ್ಕ ಅವರ ಸ್ನೇಹ ಸಂಪಾದಿಸಿದ್ದಾರೆ. 19 ವರ್ಷದ ನಿತ್ಯಾನಂದ ನಾಯ್ಕ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದು, ಚಾಲಕ ಮಣಿಕಂಠ ಗೌಡ ಅವರ ಸಹವಾಸಕ್ಕೆ ಬಿದ್ದು ಮಾದಕ ವ್ಯಸನಗಳ ಸೇವನೆ ಶುರು ಮಾಡಿದ್ದಾರೆ.
ಏಪ್ರಿಲ್ 19ರಂದು ಕುಮಟಾ ರೈಲ್ವೆ ನಿಲ್ದಾಣದ ಬಳಿ ಮಣಿಕಂಠ ಗೌಡ ಅವರ ಜೊತೆ ಸೇರಿ ನಿತ್ಯಾನಂದ ನಾಯ್ಕ ಅಮಲಿನ ನಶೆಯಲ್ಲಿ ತೇಲಾಡುತ್ತಿದ್ದರು. ಮೈಮೇಲೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಅಲೆದಾಡುತ್ತಿದ್ದ ಅವರನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದರು. ಕುಮಟಾ ಪಿಸೈ ಖಾದರ್ ಭಾಷಾ ಅವರು ರೈಲು ನಿಲ್ದಾಣದ ಬಳಿ ಆಗಮಿಸಿ ಅವರಿಬ್ಬರನ್ನು ಮಾತನಾಡಿಸುವ ಪ್ರಯತ್ನ ಮಾಡಿದರು. ಅಮಲಿನಲ್ಲಿದ್ದ ಅವರಿಬ್ಬರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಪೊಲೀಸರೇ ಅವರಿಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಏಪ್ರಿಲ್ 20ರಂದು ಮಣಿಕಂಠ ಗೌಡ ಅವರ ಜೊತೆ ಸೇರಿ ನಿತ್ಯಾನಂದ ನಾಯ್ಕ ಅವರಿಬ್ಬರ ವೈದ್ಯಕೀಯ ವರದಿ ಹೊರ ಬಂದಿತು. ಅವರಿಬ್ಬರು ಗಾಂಜಾ ಸೇವಿಸಿರುವುದನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದರು. ಗಾಂಜಾ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಈಗಾಗಲೇ ಸಾಕಷ್ಟು ಪ್ರಚಾರ ನೀಡಿದ್ದು, ನಿಷೇಧಿತ ವಸ್ತು ಸೇವನೆ ಅಪರಾಧ ಎಂಬ ಅರಿವಿದ್ದರೂ ಆ ದುಶ್ಚಟಕ್ಕೆ ದಾಸರಾದ ಕಾರಣ ಅವರಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.