ಯಲ್ಲಾಪುರದ ಇಡಗುಂದಿ ಸೊಸೈಟಿಯ ಮಹೇಂದ್ರ ಬೊಲೇರೊ ಪಿಕಪ್ ಜೊಯಿಡಾದಲ್ಲಿ ಅಪಘಾತಕ್ಕೀಡಾಗಿದೆ. ಉಳವಿ-ಶಿವಪುರ ಮಾರ್ಗದಲ್ಲಿ ಪಿಕಪ್ ಪಲ್ಟಿಯಾಗಿದೆ.
ಯಲ್ಲಾಪುರ ಬೀರಗದ್ದೆಯ ಗೋಪಾಲಕೃಷ್ಣ ನಾರಾಯಣ ಗೌಡ ಅವರು ಈ ಪಿಕಪ್ ಓಡಿಸುತ್ತಿದ್ದರು. ಅವರು ಏಪ್ರಿಲ್ 22ರ ಸಂಜೆ 6.30ಕ್ಕೆ ಉಳುವಿಯಿಂದ ಶಿವಪುರದ ಕಡೆ ಹೊರಟಿದ್ದರು. ಪಿಕಪ್ ವೇಗ ಹೆಚ್ಚಾಗಿದ್ದು, ವಾಹನ ನಿಯಂತ್ರಿಸಲಾಗದೇ ಅದನ್ನು ಅಪಘಾತಕ್ಕೀಡು ಮಾಡಿದರು. ಗದ್ದೆಮನೆ ಸಮೀಪದ ರಸ್ತೆ ತಿರುವಿನ ತಗ್ಗಿನಲ್ಲಿ ಪಿಕಪ್ ಚಾಲಕನ ನಿಯಂತ್ರಣ ತಪ್ಪಿತು. ಅಲ್ಲಿಯೇ ಅದು ಪಲ್ಟಿಯಾಯಿತು.
ಈ ಅಪಘಾತದಲ್ಲಿ ಗೋಪಾಲಕೃಷ್ಣ ಗೌಡ ಅವರಿಗೆ ಸಣ್ಣ ನೋವಾಗಿದ್ದರೂ ಜೀವಕ್ಕೆ ಸಮಸ್ಯೆ ಆಗಲಿಲ್ಲ. ಆದರೆ, ವಾಹನ ಜಖಂ ಆಗಿದೆ. ಅತಿ ವೇಗವಾಗಿ ಪಿಕಪ್ ಓಡಿಸಿ ವಾಹನ ಅಪಘಾತಕ್ಕೀಡು ಮಾಡಿದ ಚಾಲಕನ ವಿರುದ್ಧ ಸೊಸೈಟಿ ಸಿಬ್ಬಂದಿ ಪೊಲೀಸ್ ದೂರು ನೀಡಿದ್ದಾರೆ. ಹಂಸನಗದ್ದೆ, ಬಳಗಾರ ನಿವಾಸಿಯಾಗಿರುವ ಇಡುಗುಂದಿ ಸೊಸೈಟಿಯ ಸಿಬ್ಬಂದಿ ವಿನಯ ವಾಸುದೇವ ಭಟ್ಟ ಅವರು ಗೋಪಾಲಕೃಷ್ಣ ಗೌಡ ಅವರ ದುಡುಕುತನದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಹಿನ್ನಲೆ ಜೊಯಿಡಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಿಸಿ, ತನಿಖೆಯನ್ನು ಶುರು ಮಾಡಿದ್ದಾರೆ.