ಹಳಿಯಾಳ ಕಾರಾಗೃಹದ ಜೈಲರ್ ಕಲ್ಲಪ್ಪ ಗಸ್ತಿ ಅವರು ಕೊಲೆ ಆರೋಪಿಯಿಂದ ಲಂಚ ಬೇಡಿದ್ದಾರೆ. ಹೀಗಾಗಿ ಲೋಕಾಯುಕ್ತರು ಕಾರಾಗೃಹದ ಮೇಲೆ ದಾಳಿ ಮಾಡಿ, ಏಳು ತಾಸು ತಪಾಸಣೆ ನಡೆಸಿದ್ದಾರೆ.
2022ರಲ್ಲಿ ಯಡೋಗಾ ಗ್ರಾಮದ ರಾಜಕುಮಾರ ಹುಂದೇಕರ ಅವರು ತಮ್ಮ ಪತ್ನಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ವಿಚಾರಣಾಧೀನ ಕೈದಿಯಾಗಿ ಅವರು ಜೈಲಿನಲ್ಲಿದ್ದರು. ರಾಜಕುಮಾರ ಹುಂದೇಕರ ಅವರು ಜೈಲಿನಲ್ಲಿ ಕೂಲಿ ಕೆಲಸ ಮಾಡಿದ್ದ 1.40 ಲಕ್ಷ ರೂ ಹಣಪಡೆಯಲು ಜೈಲರ್ ಕಲ್ಲಪ್ಪ ಗಸ್ತಿ ಅವರು 60 ಸಾವಿರ ರೂ ಲಂಚ ಬೇಡಿದ್ದರು. ಇದರಿಂದ ಬೇಸತ್ತ ರಾಜಕುಮಾರ ಹುಂದೇಕರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಗುರುವಾರ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ಸಬ್ ಜೈಲ್ ಮೇಲೆ ದಾಳಿ ನಡೆಸಿದ್ದಾರೆ. ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ಲೋಕಾಯುಕ್ತರಿಗೆ ಪ್ರಮುಖ ಸಾಕ್ಷಿಗಳು ಸಿಕ್ಕಿವೆ. ಮೊಬೈಲ್ ವಶಕ್ಕೆ ಪಡೆದ ಲೋಕಾಯುಕ್ತರಿಗೆ ಧ್ವನಿ ಮಾದರಿ ಸೇರಿದಂತೆ ಪ್ರಮುಖ ಮಾಹಿತಿಗಳು ದೊರೆತಿವೆ. ಇನ್ನೂ ಹಣ ಸ್ವೀಕರಿಸುವ ವೇಳೆ ಜೈಲರ್ ನೇರವಾಗಿ ಸ್ವೀಕರಿಸಲು ಮುಂದಾಗದೆ ಪದೇ ಪದೇ ಸ್ಥಳ ಬದಲಾಯಿಸುತ್ತಿರುವ ಅಂಶವೂ ಹೊರಬಿದ್ದಿದೆ.
ಈ ನಡುವೆ ಧಾರವಾಡದ ಮಹಿಳಾ ನ್ಯಾಯವಾದಿಯೊಬ್ಬರಿಗೆ ಜೈಲರ್ 10 ಸಾವಿರ ರೂ ಪಾವತಿಸುವಂತೆ ಸೂಚಿಸಿದ್ದು, ಫೋನ್ ಪೇ ಮೂಲಕ ಪಾವತಿಸಿದ ಹಣವೂ ಪ್ರಮುಖ ಸಾಕ್ಷಿಯಾಗಿದೆ. ಹಣದ ಬೇಡಿಕೆ ಹಾಗೂ ಡಿಜಿಟಲ್ ವ್ಯವಹಾರಗಳಿಗೆ ಸಂಬAಧಿಸಿದ ಸಾಕ್ಷಾಧಾರಗಳು ಲಭ್ಯವಾಗಿದ್ದು, ಜೈಲರ್ ಭ್ರಷ್ಟಾಚಾರದಲ್ಲಿ ತೊಡಗಿರುವುದಕ್ಕೆ ಪ್ರಾಥಮಿಕ ದಾಖಲೆ ಸಿಕ್ಕಿದೆ. ಇನ್ನಷ್ಟು ದಾಖಲೆ ಸಂಗ್ರಹಕ್ಕಾಗಿ ಲೋಕಾಯುಕ್ತರು ಎರಡು ತಂಡ ರಚಿಸಿದ್ದಾರೆ.