ಸರ್ಕಾರಿ ಸೇವೆಯಲ್ಲಿದ್ದ ನೌಕರರಿಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಿತರಿಗೆ ನ್ಯಾಯಾಲಯ 2 ಸಾವಿರ ರೂ ದಂಡವಿಧಿಸಿದ್ದು, ಸಂತ್ರಸ್ತರಿಗೂ 2 ಸಾವಿರ ರೂ ಪರಿಹಾರ ಒದಗಿಸುವಂತೆ ಆರೋಪಿತರಿಗೆ ಆದೇಶಿಸಿದೆ.
2018ರ ಮಾರ್ಚ 2ರಂದು ದಾಂಡೇಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆದಿತ್ತು. ಸಂಜೆ 5.30ರ ವೇಳೆಗೆ ಮೌಳಂಗಿ ಇಕೋ ಪಾರ್ಕಿನಲ್ಲಿ ಕರ್ತವ್ಯದ ಮೇಲಿದ್ದ ಅರಣ್ಯ ಸಿಬ್ಬಂದಿ ಮಹೇಶ ಅಧಿವಾಸಿ ಹಾಗೂ ನೀಲೇಷ ಚಿಕ್ಕೋಡಿ ಅವರ ಮೇಲೆ ರಫೀಕ್ ಅಹ್ಮದ್ ಹಾಗೂ ವಿಷ್ಣು ಎಂಬಾತರು ಆಕ್ರಮಣ ನಡೆಸಿದ್ದರು. ನೌಕರರಿಬ್ಬರಿಗೂ ಕೆಟ್ಟದಾಗಿ ಬೈದು, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಇದರಿಂದ ನೊಂದ ನೌಕರರಿಬ್ಬರೂ ಪೊಲೀಸರ ಮೊರೆ ಹೋಗಿದ್ದರು.
ಪ್ರಕರಣದ ಗಂಭೀರತೆ ಅರಿತ ಪೊಲೀಸರು ಪ್ರಕರಣ ದಾಖಲಿಸಿದ್ದರು. ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಸೈ ಸುನೀಲಕುಮಾರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿತು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದ ಬಗ್ಗೆ ವಾದ ಮಂಡಿಸಿದ್ದು, ವಿವಿಧ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆ ದಿನ ನಡೆದ ಘಟನಾವಳಿಗಳ ಬಗ್ಗೆ ವಿವರಿಸಿ ಆರೋಪಿತರು ಮಾಡಿದ ಅಪರಾಧವನ್ನು ಸಾಭೀತು ಮಾಡಿದರು.
ವಾದ ಆಲಿಸಿದ ನ್ಯಾಯಾಧೀಶ ಕಿರಣ ಕಿಣಿ ಅವರು ಆರೋಪಿ ರಫೀಕ್ ಅಹ್ಮದ್ ಮತ್ತು ವಿಷ್ಣು ಅವರಿಗೆ ತಲಾ 2 ಸಾವಿರ ರೂ ದಂಡ ವಿಧಿಸಿದರು. ಜೊತೆಗೆ ಹಲ್ಲೆಗೆ ಒಳಗಾದ ಅರಣ್ಯ ಸಿಬ್ಬಂದಿಗೂ ಆರೋಪಿತರು ತಲಾ 2 ಸಾವಿರ ರೂ ಪರಿಹಾರ ಒದಗಿಸಬೇಕು ಎಂದು ಆದೇಶಿಸಿದರು.