ಹಳಿಯಾಳದ ಜನಗಾ ಕ್ರಾಸಿನಿಂದ ಸಂಕನಕೊಪ್ಪದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆ ರಿಪೇರಿಗಾಗಿ ಸರ್ಕಾರ ಟೆಂಡರ್ ಕರೆದಿದೆ. ಆದರೆ, 8 ಲಕ್ಷ ರೂಪಾಯಿಗೆ ಗುತ್ತಿಗೆಪಡೆದವರಿಗೆ ಆ ಕೆಲಸ ಮಾಡಲು ಆಸಕ್ತಿ ಇಲ್ಲ. ಸರಿಯಾಗಿ ಕೆಲಸ ಮಾಡದೆಯೇ ಆ 8 ಲಕ್ಷ ರೂ ಕಬಳಿಸಲು ಗುತ್ತಿಗೆದಾರ ಸಂಚು ರೂಪಿಸಿದ ಅನುಮಾನ ಜನರನ್ನು ಕಾಡುತ್ತಿದೆ.
ಜನಗಾ ಕ್ರಾಸಿನಿಂದ ಸಂಕನಕೊಪ್ಪದವರೆಗಿನ ರಸ್ತೆಯಲ್ಲಿ ಹಲವು ಗುಂಡಿಗಳಿವೆ. ಗುಂಡಿ ಹೆಚ್ಚಿರುವ ಕಾರಣದಿಂದಲೇ ಇಲ್ಲಿ ಪದೇ ಪದೇ ಅಪಘಾತಗಳಾಗುತ್ತಿವೆ. ಮಳೆಗಾಲದ ಅವಧಿಯಲ್ಲಿ ರಸ್ತೆ ಗುಂಡಿಯಲ್ಲಿ ನೀರು ತುಂಬುವುದರಿAದ ಅದರ ಆಳ-ಅಗಲವೂ ಸರಿಯಾಗಿ ಗೊತ್ತಾಗುತ್ತಿಲ್ಲ. ಅದರಲ್ಲಿಯೂ ರಾತ್ರಿ ವೇಳೆ ಓಡಾಡುವ ವಾಹನ ಸವಾರರು ಇಲ್ಲಿ ನಿತ್ಯವೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕರ ಹೋರಾಟದ ಎಚ್ಚರಿಕೆ ನಂತರ ರಸ್ತೆ ರಿಪೇರಿಗಾಗಿ ಅಧಿಕಾರಿಗಳು ಆಸಕ್ತಿವಹಿಸಿದ್ದಾರೆ. ಇದಕ್ಕಾಗಿ 8 ಲಕ್ಷ ರೂ ಮೊತ್ತದಲ್ಲಿ ಗುತ್ತಿಗೆಯನ್ನು ಕರೆದಿದ್ದಾರೆ. ಆದರೆ, ಗುತ್ತಿಗೆಪಡೆದವರು ಅಲ್ಲಿ-ಇಲ್ಲಿ ಒಂದೊAದು ಗುಂಡಿ ಮುಚ್ಚುವ ಮೂಲಕ ತೇಪೆ ಸಾರುವ ಕೆಲಸ ಮಾಡಿದ್ದಾರೆ.
`8 ಲಕ್ಷ ರೂ ಸರಿಯಾಗಿ ವಿನಿಯೋಗ ಆದರೆ ಇಡೀ ರಸ್ತೆ ಸುಧಾರಣೆ ಆಗುತ್ತದೆ. ಕೆಲವೇ ಕೆಲ ಗುಂಡಿಗಳನ್ನು ಮುಚ್ಚಿ ಉಳಿದವನ್ನು ಹಾಗೇ ಬಿಡುವುದರಿಂದ ಯಾರಿಗೂ ಪ್ರಯೋಜನವಿಲ್ಲ’ ಎಂಬುದು ಜನರ ಮಾತು. `ಸಾರ್ವಜನಿಕ ಹಿತ ಗಮನಿಸದ ಗುತ್ತಿಗೆದಾರರು ಅಪೂರ್ಣ ಕಾಮಗಾರಿ ಮಾಡಿದ್ದಾರೆ. ನಿಗಧಿತ ಅವಧಿಯಲ್ಲಿ ಕಾಮಗಾರಿ ಮುಗಿಯಬೇಕಿದ್ದರೂ ಅದು ಮುಗಿದಿಲ್ಲ. ಗುತ್ತಿಗೆದಾರರು ಏಕೆ ಈ ಕಾಮಗಾರಿ ಮುಗಿಸಿಲ್ಲ? ಎಂದು ಅಧಿಕಾರಿಗಳು ಸಹ ಪ್ರಶ್ನಿಸುತ್ತಿಲ್ಲ. ಸರ್ಕಾರದ ನಿಯಮದ ಪ್ರಕಾರ ಸೂಕ್ತ ನಾಮಫಲಕಗಳನ್ನು ಸಹ ಅಳವಡಿಸಿಲ್ಲ. ಈ ಬಗ್ಗೆ ದೂರಿದರೂ ಅಧಿಕಾರಿಗಳು ಗಮನಹರಿಸಿಲ್ಲ’ ಎಂಬುದು ಆ ಭಾಗದಲ್ಲಿ ನಿತ್ಯ ಓಡಾಡುವವರ ಆಕ್ಷೇಪ.
ಈ ರಸ್ತೆಯಲ್ಲಿ ಪ್ರತಿದಿನ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ರೈತರು ಸೇರಿದಂತೆ ವಿವಿಧ ವರ್ಗದ ಜನರು ಸಂಚರಿಸುತ್ತಾರೆ. ಗುತ್ತಿಗೆದಾರ ಮಾಡಿದ ತಪ್ಪಿನಿಂದ ಅವರೆಲ್ಲರೂ ಓಡಾಡುವ ವಾಹನ ಅಪಘಾತಕ್ಕೀಡಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಅವರು ಮೌನವಾಗಿರುವುದು ಗ್ರಾಮಸ್ಥರ ಅನುಮಾನಕ್ಕೆ ಕಾರಣವಾಗಿದೆ. `ಉತ್ತಮ ರಸ್ತೆಪಡೆಯುವುದು ನಮ್ಮ ಹಕ್ಕು. ಹೋರಾಟದ ಮೂಲಕ ರಸ್ತೆ ರಿಪೇರಿಗೆ ಅನುದಾನ ಸಿಕ್ಕಿದ್ದು, ಕೆಲಸ ಸರಿಯಾಗಿ ಆಗದಿದ್ದರೆ ಇನ್ನಷ್ಟು ಹೋರಾಟ ನಡೆಸಲು ಸಿದ್ಧ’ ಎಂದು ಊರಿನವರು ಎಚ್ಚರಿಸಿದ್ದಾರೆ.