ಶಿರಸಿ ಅಶ್ವಿನಿ ಸರ್ಕಲ್ ಬಳಿಯ ಬೆಳ್ಳಿಮನೆ ಕಟ್ಟಡದಲ್ಲಿ ಅನಧಿಕೃತ ಕ್ಲಬ್ ನಡೆಯುತ್ತಿದೆ. ಅಲ್ಲಿನ 2ನೇ ಮಹಡಿಯಲ್ಲಿರುವ ಕೊಠಡಿಯನ್ನು ಕುಮಟಾದ ವೆಂಕಟೇಶ ನಾಯ್ಕ ಅವರು ಬಾಡಿಗೆಪಡೆದಿದ್ದು, ಜೂಜಾಟ ನಡೆಸುತ್ತಿದ್ದಾರೆ.
ಈ ಜೂಜು ಕೇಂದ್ರಕ್ಕೆ ಶಿವಮೊಗ್ಗ ಹರೀಶಿಯ ಕ್ಲಬ್ ಮ್ಯಾನೇಜರ್ ಭರತ್ ಬಂಗಾರಪ್ಪ ಮಡಿವಾಳ ಅವರು ಮ್ಯಾನೇಜರ್ ಆಗಿದ್ದಾರೆ. ಬಣ್ಣ ಬಣ್ಣದ ಟೋಕನ್ ನೀಡಿ ಇಲ್ಲಿ ಆಟ ಆಡಿಸಲಾಗುತ್ತದೆ. ಈ ಬಣ್ಣದ ಆಟಕ್ಕೆ ಶಿರಸಿ ಅಂಬಾಗಿರಿ ಮುಖ್ಯರಸ್ತೆಯ ವ್ಯಾಪಾರಿ ರಮೇಶ ಶಿವಮೂರ್ತಿ ಹೊಂಬಾಳೆ ಅವರು ಮರಳಾಗಿದ್ದಾರೆ. ಜೊತೆಗೆ ಬಿಸಿಲಕೊಪ್ಪ ಉಲ್ಲಾಳದ ಕಾರ್ಮಿಕ ಮಂಜುನಾಥ ಆನಂದ ನಾಯ್ಕ, ಕಾನಗೋಡಿನ ಚಾಲಕ ಶ್ರೀಪಾದ ಕರಿಯಾ ನಾಯ್ಕ, ಬೈರುಂಬೆ ದೊಡ್ಡಬೈಲಿನ ಕೃಷಿಕ ನಾರಾಯಣ ಗಣಪತಿ ಮರಾಠಿ, ರಾಮನಬೈಲ್ ಐದನೇ ಕ್ರಾಸಿನ ಕಾರ್ಪರೆಂಟರ್ ಶ್ರೀಧರ ಹನುಮಂತ ನಾಯ್ಕ ಅವರು ಸಹ ಅಲ್ಲಿ ಟೊಕನ್‌ಪಡೆದು ಜೂಜಾಟ ಆಡುತ್ತಾರೆ.
ಸ್ವಯಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವ ಬಾಳೆಗದ್ದೆ ಬಳಿಯ ಹೊನಗದ್ದೆಯ ದಿನೇಶ ಗಣಪತಿ ಹೆಗಡೆ, ಸಾಲ್ಕಣಿಯ ಕೃಷಿಕ ರಾಜೇಶ ಶಂಕರ ದೀಕ್ಷಿತ್, ಹುಸುರಿಯ ಕೃಷಿಕ ಕೃಷ್ಣಮೂರ್ತಿ ನಾಗರಾಜ ನಾಯ್ಕ, ಮಾರಿಕಾಂಬಾ ನಗರದ ಚಾಲಕ ಮಂಜುನಾಥ ಗೋವಿಂದ ನಾಯ್ಕ ಅವರು ಸಹ ಜೂಜಾಟದಲ್ಲಿ ಹಿಂದೆ ಬಿದ್ದಿಲ್ಲ. ಅಶ್ವಿನಿ ಸರ್ಕಲ್ ಬಳಿಯ ಬೆಳ್ಳಿಮನೆ ಕಟ್ಟಡಕ್ಕೆ ಆಗಮಿಸುವ ಅವರೆಲ್ಲರೂ ಅಲ್ಲಿ ಕಾಸು ಕೊಟ್ಟು ಟೊಕನ್ ಖರೀದಿಸುತ್ತಿದ್ದಾರೆ. ನಂತರ ಕಾಸಿನ ಬದಲು ಬಣ್ಣ ಬಣ್ಣದ ಟೊಕನ್ ವಿನಿಯಮ ಮಾಡಿ ಜೂಜಾಡುತ್ತಾರೆ.
ಏಪ್ರಿಲ್ 19ರಂದು ಈ ಜೂಜು ಕೇಂದ್ರಕ್ಕೆ ಶಿರಸಿ ಮಾರುಕಟ್ಟೆ ಠಾಣೆ ಪಿಸೈ ಪಿಸೈ ಬಸವರಾಜ ಕನಶೆಟ್ಟಿ ಅವರು ಭೇಟಿ ನೀಡಿದ್ದಾರೆ. ಅನಧಿಕೃತ ಆಟ ಆಡಿಸುತ್ತಿದ್ದ ವೆಂಕಟೇಶ ನಾಯ್ಕ ಹಾಗೂ ಭರತ ಮಡಿವಾಳ ಅವರನ್ನು ಮಾತನಾಡಿಸಿದ್ದಾರೆ. ಜೊತೆಗೆ ಆ ಆಟ ಆಡಲು ಆಗಮಿಸಿದ್ದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಬಣ್ಣದ ಟೊಕನ್ ಹಿಡಿದು ಜೂಜಾಡುತ್ತಿದ್ದವರಿಗೆ ಕಠಿಣ ಕ್ರಮವಾಗಿದೆ.