ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಾಗಸಿರಿ ಮರಾಠಿ ಹಾಗೂ ಗಣೇಶ ಆಚಾರಿ ಅವರ ನಡುವಿನ ಪ್ರೀತಿ ಮುರಿದು ಬಿದ್ದಿದೆ. ಪ್ರೀತಿಯ ಸಂಕೇತವಾಗಿ ಗಣೇಶ ಆಚಾರಿ ಅವರು ಕೈ ಮೇಲೆ ಟ್ಯಾಟು ಹಾಕಿಸಿಕೊಂಡಿದ್ದು, ಆ ಟ್ಯಾಟು ತೆಗಿಸಲು ಹಣ ಕೊಡುವಂತೆ ನಾಗಸಿರಿ ಅವರಲ್ಲಿ ದುಂಬಾಲು ಬಿದ್ದಿದ್ದಾರೆ!
ಶಿರಸಿ ಗ್ರಾಮೀಣ ಭಾಗದ ನಾಗಸಿರಿ ಮರಾಠಿ (ಹೆಸರು ಬದಲಿಸಿದೆ) ಅವರು ಪ್ರಥಮ ವರ್ಷದ ವಿದ್ಯಾರ್ಥಿನಿ. ಅದೇ ಕಾಲೇಜಿನಲ್ಲಿ ಓದುವ ಭಾಶಿಯ ಗಣೇಶ ಮಂಜುನಾಥ ಆಚಾರಿ (21) ಅವರು ನಾಗಸಿರಿ (19) ಅವರನ್ನು ಪ್ರೀತಿಸಲು ಶುರು ಮಾಡಿದ್ದು, ಎಂಟು ತಿಂಗಳ ಹಿಂದೆ ನಾಗಸಿರಿ ಅವರು ಸಹ ಆ ಪ್ರೀತಿಯನ್ನು ಮನ್ನಿಸಿದ್ದಾರೆ. ಕಾಲೇಜು ಕಲಿಕೆ ಅವಧಿಯಲ್ಲಿಯೇ ಭವಿಷ್ಯದ ಬಗ್ಗೆ ಕನಸು ಕಟ್ಟಿಕೊಂಡ ಈ ಜೋಡಿ ಪ್ರೀತಿ-ಪ್ರೇಮ ಎಂದು ಎಲ್ಲಡೆ ಸುತ್ತಾಟ ನಡೆಸಿದ್ದಾರೆ. ಆ ಪ್ರೀತಿಯ ಸಂಕೇತವಾಗಿ ಗಣೇಶ ಆಚಾರಿ ಅವರು ತಮ್ಮ ಕೈ ಮೇಲೆ ಹೃದಯದ ಆಕಾರದ ಟ್ಯಾಟು ಹಾಕಿಸಿಕೊಂಡಿದ್ದಾರೆ.
ನಾಲ್ಕು ತಿಂಗಳ ನಂತರ ಅವರಿಬ್ಬರ ಪ್ರೀತಿಯಲ್ಲಿ ಸಣ್ಣ ಬಿರುಕು ಮೂಡಿದೆ. `ಬೇರೆ ಹುಡುಗರ ಜೊತೆ ಮಾತನಾಡಬಾರದು’ ಎಂದು ಗಣೇಶ ಆಚಾರಿ ಅವರು ತಮ್ಮ ಪ್ರೇಯಸಿಗೆ ಸೂಚನೆ ನೀಡಿದ್ದಾರೆ. ಎಲ್ಲರ ಜೊತೆಯೂ ಸ್ನೇಹದಿಂದಿದ್ದ ನಾಗಸಿರಿ ಅವರಿಗೆ ಪ್ರಿಯತಮನ ಈ ಮಾತಿಗೆ ಬೆಲೆ ಕೊಟ್ಟಿಲ್ಲ. `ತಾನು ಪ್ರೀತಿಸುವ ಹುಡುಗಿ ತನ್ನ ಮಾತನ್ನು ಪಾಲಿಸುತ್ತಿಲ್ಲ’ ಎಂಬ ಕಾರಣದಿಂದ ಗಣೇಶ ಆಚಾರಿ ಅವರು ಸಿಟ್ಟಾಗಿದ್ದಾರೆ. ಬೇರೆ ಬೇರೆ ಹುಡುಗರ ಜೊತೆ ಅನ್ಯೋನ್ಯವಾಗಿದ್ದ ನಾಗಸಿರಿ ಅವರ ಮೇಲೆ ಗಣೇಶ ಆಚಾರಿ ಅವರಿಗೆ ಸಂಶಯ ಶುರುವಾಗಿದೆ.
ಕಾಡಿಸಿ-ಪೀಡಿಸಿ ಪ್ರೀತಿಸುತ್ತಿದ್ದ ಗಣೇಶ ಆಚಾರಿ ವರ್ತನೆ ಬದಲಾದ ಕಾರಣ ನಾಗಸಿರಿ ಅವರು ಪ್ರಿಯತಮನಿಂದ ಅಂತರ ಕಾಯ್ದುಕೊಂಡಿದ್ದಾರೆ. ಗಣೇಶ ಆಚಾರಿ ಅವರ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾರೆ. ಇದರಿಂದ ಗಣೇಶ ಆಚಾರಿ ಅವರ ಸಿಟ್ಟು ಇನ್ನಷ್ಟು ಹೆಚ್ಚಾಗಿದ್ದು, ಅವರಿಬ್ಬರು ತಮ್ಮ ಪ್ರೀತಿ ಮುರಿದುಕೊಂಡಿದ್ದಾರೆ. ಈ ವೇಳೆ ಪ್ರೀತಿಯ ಸಂಕೇತವಾಗಿ ಹಾಕಿಕೊಂಡಿದ್ದ ಹೃದಯ ಆಕಾರದ ಟ್ಯಾಟು ತೆಗೆಸಲು ಗಣೇಶ ಆಚಾರಿ ಅವರು ನಿರ್ಧರಿಸಿದ್ದಾರೆ. ಆ ಟ್ಯಾಟು ತೆಗಿಸಲು 16 ಸಾವಿರ ರೂ ಖರ್ಚಾಗುವ ಬಗ್ಗೆ ಅರಿತು, ಆ ಹಣ ಕೊಡುವಂತೆ ನಾಗಸಿರಿ ಅವರಲ್ಲಿ ಕೇಳಿದ್ದಾರೆ.
`ತನ್ನ ಬಳಿ ಅಷ್ಟು ಹಣವಿಲ್ಲ’ ಎಂದು ನಾಗಸಿರಿ ಅವರು ಹೇಳಿದ್ದಾರೆ. `ನಿನಗಾಗಿ ಹಾಕಿಸಿಕೊಂಡ ಟ್ಯಾಟೋ. ಅದನ್ನು ತೆಗೆಸಲು ನೀನೇ ಹಣ ಕೊಡಬೇಕು’ ಎಂದು ಗಣೇಶ ಆಚಾರಿ ಅವರು ದುಂಬಾಲು ಬಿದ್ದಿದ್ದಾರೆ. ಏಪ್ರಿಲ್ 15ರಂದು ಮತ್ತೊಮ್ಮೆ ಹಣ ಕೊಡುವಂತೆ ಕೇಳಿದ ಗಣೇಶ ಆಚಾರಿ ಆ ಹಣ ಕೊಡದ ಕಾರಣ ನಾಗಸಿರಿ ಅವರ ಕೆನ್ನೆಗೆ ಹೊಡೆದಿದ್ದಾರೆ. ಟಿಪ್ಪು ನಗರದ ಕಾಲೇಜು ಸಮೀಪದ ರಸ್ತೆಯಲ್ಲಿ ನಾಗಸಿರಿ ಅವರನ್ನು ಅಡ್ಡಹಾಕಿ, ಅವರ ಕೈ ಹಿಡಿದು ಎಳೆದಿದ್ದಾರೆ. `ಹಣ ಕೊಡದೇ ನೀ ಹೇಗೆ ಮನೆಗೆ ಹೋಗುತ್ತೀಯಾ? ಎಂದು ನೋಡುತ್ತೇನೆ’ ಎಂದು ಹೇಳಿ ಬೆದರಿಸಿದ್ದಾರೆ. ಕೆನ್ನೆ ಮೇಲೆ ಏಟು ಬಿದ್ದ ನೋವಿನಲ್ಲಿದ್ದ ನಾಗಸಿರಿ ಅವರು ಪ್ರೀತಿಸಿದ ಹುಡುಗನಿಂದಲೇ ಆದ ಅನ್ಯಾಯದ ಬಗ್ಗೆ ಪೊಲೀಸರಿಗೆ ಹೇಳಿದ್ದಾರೆ. 16 ಸಾವಿರ ರೂ ಕೊಡದ ಕಾರಣ ಕೆನ್ನೆಗೆ ಹೊಡೆದ ಗಣೇಶ ಆಚಾರಿ ವಿರುದ್ಧ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.