ರೈತರಿಗೆ ನೀಡುವ ಬೆಳೆ ಸಾಲ ಹಾಗೂ ಮಾಧ್ಯಮಿಕ ಸಾಲ ದುರುಪಯೋಗಪಡಿಸಿಕೊಂಡ ಕುಮಟಾ ಬರಗದ್ದೆಯ ಗ್ರಾಮೀಣ ಸೇವಾ ಸಹಕಾರಿ ಸಂಘದ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದ್ದು, ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷö್ಮಣ ಪಟಗಾರ ಅವರ ವಿರುದ್ಧ ದಾಖಲಾದ ದೂರು ಇದೀಗ ವಿಶೇಷ ನ್ಯಾಯಾಲಯಕ್ಕೆ ವರ್ಗವಾಗಿದೆ.
ತನಿಖೆ ನಡೆಸುತ್ತಿರುವ ಸಿಐಡಿ ಮನವಿಯನ್ನು ಪುರಸ್ಕರಿಸಿರುವ ಪ್ರಧಾನ ಸಿವಿಲ್ ನ್ಯಾಯಾಧೀಶರು ಪ್ರಕರಣವನ್ನು ಕಾರವಾರದ ವಿಶೇಷ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ. ಇದೇ ಪ್ರಕರಣದ ಸಲುವಾಗಿ ಲಕ್ಷ್ಮಣ ಪಟಗಾರ ಅವರನ್ನು ಏಪ್ರಿಲ್ 6ರಂದು ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ಅವರನ್ನು ಪೊಲೀಸ್ ಕಸ್ಟಡಿಗೆ ಕೋರಿದ್ದು, ಆರೋಪಿ ಪರ ವಕೀಲರು ಒಂದೇ ಅಪರಾಧಕ್ಕೆ ಎರಡು ಬಾರಿ ವಿಚಾರಣೆ ನಡೆಸುವುದನ್ನು ವಿರೋಧಿಸಿದ್ದರು. ಆದರೆ, ಪ್ರತಿ ಪ್ರಕರಣವೂ ವಿಭಿನ್ನವಾಗಿದ್ದು ತನಿಖೆಗೆ ಅಡ್ಡಿಪಡಿಸಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟು ಏಪ್ರಿಲ್ 10ರವರೆಗೆ ಪೊಲೀಸ್ ಕಸ್ಟಡಿಗೆವಹಿಸಿತ್ತು.
ಪೊಲೀಸ್ ಕಸ್ಟಡಿ ಮುಗಿದ ನಂತರ ಆರೋಪಿಯನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಆರೋಪಿಯ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿ ವಿಚಾರಣೆಗೆ ಅನುಮತಿ ಕೋರಿದ್ದರು. ಈ ವೇಳೆ ಆರೋಪಿ ಪರವಾಗಿ ಸಲ್ಲಿಕೆಯಾಗಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಆರೋಪಿಯ ಮೇಲೆ ಹೊರಿಸಲಾದ ಅಪರಾಧಗಳು ಗಂಭೀರ ಸ್ವರೂಪದ್ದಾಗಿದ್ದು, 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾದ ಜಾಮೀನು ರಹಿತ ಪ್ರಕರಣಗಳಾಗಿವೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಏಪ್ರಿಲ್ 25ರಂದು ನಡೆದ ವಿಚಾರಣೆಯಲ್ಲಿ ತನಿಖಾ ಸಂಸ್ಥೆಯು ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ತನಿಖೆ ಮುಂದುವರಿಸಲು ಮತ್ತು ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ವಿನಂತಿಸಿತು. ಆರೋಪಿ ಪರ ವಕೀಲರು ಇದನ್ನು ವಿರೋಧಿಸಿದರೂ, ತನಿಖೆಯ ಈ ಪ್ರಾಥಮಿಕ ಹಂತದಲ್ಲಿ ನ್ಯಾಯಾಲಯವು ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು. ತನಿಖಾ ಸಂಸ್ಥೆಗೆ ಮುಕ್ತವಾಗಿ ತನಿಖೆ ನಡೆಸುವ ಅಧಿಕಾರವಿದೆ ಮತ್ತು ಈ ಹಂತದಲ್ಲಿ ವಿನಂತಿಯನ್ನು ತಿರಸ್ಕರಿಸುವುದು ನ್ಯಾಯದ ದೃಷ್ಟಿಯಿಂದ ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಅಂತಿಮವಾಗಿ, ಪ್ರಕರಣದ ಎಲ್ಲಾ ದಾಖಲೆಗಳನ್ನು ಕಾರವಾರದ ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿ ಹೊಂದಿರುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ನ್ಯಾಯಾಲಯ ಆದೇಶಿಸಿದೆ. ಆರೋಪಿ ಲಕ್ಷö್ಮಣ ಪಟಗಾರ ಅವರು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.