ಹಳಿಯಾಳದ ಮಂಗಳವಾಡದಲ್ಲಿನ ರುಕ್ಮಿಣಿ ಭಂಡಾರಿ ಅವರ ಮನೆಗೆ ಅದೇ ಊರಿನ ಶಾಂತರಾಮ ಜುವಳೇಕರ್ ಅವರು ಕಲ್ಲು ಹೊಡೆದಿದ್ದಾರೆ. ಮರು ದಿನ ಮತ್ತೆ ಅಲ್ಲಿಗೆ ಆಗಮಿಸಿದ ಶಾಂತರಾಮ ಜುವಳೇಕರ್ ಅವರು ಮನೆಯ ಬಾಗಿಲಿಗೆ ಮತ್ತೆ ಕಲ್ಲು ಹೊಡೆದಿದ್ದು, ಪ್ರಶ್ನಿಸಿದ ಕಾರಣ ಮಹಿಳೆಯನ್ನು ನಿಂದಿಸಿದ್ದಾರೆ.
ಹಳಿಯಾಳದ ಮಂಗಳವಾಡದದಲ್ಲಿ ರುಕ್ಮಿಣಿ ಕೃಷ್ಣ ಭಂಡಾರಿ ಅವರು ವಾಸವಾಗಿದ್ದಾರೆ. ಅದೇ ಊರಿನ ಶಾಂತರಾಮ ಮಾತೃ ಜುವಳೇಕರ್ ಅವರು ರುಕ್ಮಿಣಿ ಭಂಡಾರಿ ಅವರನ್ನು ದ್ವೇಷಿಸುತ್ತಿದ್ದು, ಏಪ್ರಿಲ್ 16ರಂದು ರುಕ್ಮಿಣಿ ಭಂಡಾರಿ ಅವರ ಮನೆ ಮೇಲೆ ಕಲ್ಲು ಹೊಡೆದು ಪರಾರಿಯಾಗಿದ್ದಾರೆ. ಆ ದಿನ ಕಲ್ಲು ಹೊಡೆದವರ ಬಗ್ಗೆ ಗೊತ್ತಿದ್ದರೂ ರುಕ್ಮಿಣಿ ಭಂಡಾರಿ ಅವರು ಮೌನವಾಗಿದ್ದು, ಮರುದಿನ ಮ ಜುವಳೇಕರ್ ಅವರು ಮತ್ತೆ ಆಗಮಿಸಿ ಕಲ್ಲು ತೂರಾಟ ಮಾಡಿದ್ದಾರೆ.
ಈ ವೇಳೆ ಆ ಕಲ್ಲು ರುಕ್ಮಿಣಿ ಭಂಡಾರಿ ಅವರ ಮನೆ ಬಾಗಿಲಿಗೆ ತಾಗಿದೆ. ಕಲ್ಲು ಜಜ್ಜಿದ ಪರಿಣಾಮ ಮನೆಯ ಬಾಗಿಲು ಒಡೆದಿದ್ದು, ಇದರಿಂದ ರುಕ್ಮಿಣಿ ಭಂಡಾರಿ ಅವರು ಸಿಟ್ಟಾಗಿದ್ದಾರೆ. ಕಲ್ಲು ತೂರಾಟ ನಡೆಸಿದ ಶಾಂತರಾಮ ಜುವಳೇಕರ್ ಅವರನ್ನು ತರಾಠೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಶಾಂತರಾಮ ಜುವಳೇಕರ್ ಹಾಗೂ ರುಕ್ಮಿಣಿ ಭಂಡಾರಿ ಅವರ ನಡುವೆ ಜೋರಾಗಿ ಜಗಳ ನಡೆದಿದೆ.
ರುಕ್ಮಿಣಿ ಭಂಡಾರಿ ಅವರನ್ನು ಕೆಟ್ಟದಾಗಿ ನಿಂದಿಸಿದ ಶಾಂತರಾಮ ಜುವಳೇಕರ್ ಅವರು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ರುಕ್ಮಿಣಿ ಭಂಡಾರಿ ಅವರು ಮನೆಯವರ ಬಳಿ ಚರ್ಚಿಸಿ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.