ಅರಣ್ಯ ಅತಿಕ್ರಮಣದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತ ಚಿಕ್ಕಮಂಗಳೂರಿನ ಬಾಳೆಹೊನ್ನೂರು ಪೀಠದದ ರಂಭಾಪುರಿ ವೀರಸೋಮೆಶ್ವರ ಸ್ವಾಮೀಜಿ ಅವರು ಭೂಮಿ ಹಕ್ಕಿನ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಪಾರಂಪರಿಕ ಅರಣ್ಯವಾಸಿಗಳು ನಡೆಸುವ ಜಾಥಾಗೆ ಅವರು ಬೆಂಬಲ ನೀಡಿದ್ದಾರೆ.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ 3 ತಲೆಮಾರಿನ ವೈಯಕ್ತಿಕ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ’ ಎಂಬ ವಿಷಯದ ಕುರಿತು ಜಾಥಾ ನಡೆಸಲು ನಿರ್ಧರಿಸಲಾಗಿದೆ. ಈ ಜಾಥಾಗೆ ರಂಭಾಪುರಿ ವೀರಸೋಮೆಶ್ವರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಏಪ್ರಿಲ್ 2ರಂದು ಬೆಳಗ್ಗೆ 10.30ಕ್ಕೆ ಕರಪತ್ರ ಬಿಡುಗಡೆ ಮೂಲಕ ಈ ಕಾನೂನು ಜಾಗೃತಿ ಜಾಥಾಗೆ ಚಾಲನೆ ಸಿಗಲಿದೆ.
ಈ ಬಗ್ಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದಾರೆ. `ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ತಿರಸ್ಕಾರವಾಗಿರುವುದರಿಂದ ಅರಣ್ಯವಾಸಿಗಳಲ್ಲಿ ದಾಖಲೆಗೆ ಸಂಬAಧಿಸಿದ ಕಾನೂನು ಅಂಶವನ್ನ ಜಾಗೃತಿ ಮಾಡುವ ಉದ್ದೇಶದಿಂದ ಮೂರು ತಲೆಮಾರಿನ ದಾಖಲೆ ಒತ್ತಾಯಿಸತಕ್ಕದ್ದಲ್ಲ ಎಂಬ ಶಿರೋನಾಮೆ ಅಡಿಯಲ್ಲಿ ರಾಜ್ಯಾದ್ಯಂತ ಜಾಥ ಸಂಘಟಿಸಲಾಗಿದೆ’ ಎಂದವರು ಹೇಳಿದ್ದಾರೆ.