ಶಿರಸಿ ಊರುತೋಟದ ಸುಬ್ರಾಯ ಹೆಗಡೆ ಅವರ ಬಾವಿಯಲ್ಲಿ ಮಳಲಿಯ ಪರಮಾ ಗೌಡ ಅವರ ಶವ ಸಿಕ್ಕಿದೆ. ಮರದ ರೆಂಬೆಯ ನಡುವೆ ಸಿಲುಕಿದ ಪರಮಾ ಗೌಡ ಅವರು ಮೇಲೆ ಬರಲಾಗದೇ ಅಲ್ಲಿಯೇ ಸಾವನಪ್ಪಿದ್ದಾರೆ.
ಶಿರಸಿ ನೆಗ್ಗು ಬಳಿಯ ಮಳಲಿಯಲ್ಲಿ ಪರಮಾ ಈರಾ ಗೌಡ (62) ಅವರು ವಾಸವಾಗಿದ್ದರು. ಊರುತೋಟದ ಸುಬ್ರಾಯ ಗಣೇಶ ಹೆಗಡೆ ಅವರ ಬಳಿ ಕೆಲಸ ಕೇಳಿಕೊಂಡು ಹೋಗಿದ್ದ ಪರಮಾ ಗೌಡ ಅವರಿಗೆ ಸುಬ್ರಾಯ ಹೆಗಡೆ ಅವರು ಆಶ್ರಯ ಕೊಟ್ಟಿದ್ದರು. ಅವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಪರಮಾ ಗೌಡ ಅವರು ಜೀವಿಸುತ್ತಿದ್ದರು. ಹೆಗಡೆರ ತೋಟದಲ್ಲಿದ್ದ ಇದ್ದ ಪಂಪ್ ಶೆಡ್’ನಲ್ಲಿಯೇ ಪರಮಾ ಗೌಡ ಅವರು ವಸತಿ ಹೂಡಿದ್ದರು.
5 ವರ್ಷದ ಹಿಂದೆ ಪರಮಾ ಗೌಡ ಅವರ ಮಗ ಮಹೇಶ ಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದ ನೊಂದಿದ್ದ ಪರಮಾ ಗೌಡ ಅವರು ಕುಡಿತದ ಚಟಕ್ಕೆ ಒಳಗಾಗಿದ್ದರು. ಈಚೆಗೆ ಅವರ ವ್ಯಸನ ತೀರಾ ಹೆಚ್ಚಾಗಿದ್ದು, ಊಟ-ತಿಂಡಿಯನ್ನು ಸಹ ಸರಿಯಾಗಿ ಮಾಡುತ್ತಿರಲಿಲ್ಲ. ಸರಾಯಿ ಸೇವನೆಯಲ್ಲಿಯೇ ಜೀವನ ನಡೆಸುತ್ತಿದ್ದ ಪರಮಾ ಗೌಡ ಅವರು ಏಪ್ರಿಲ್ 15ರ ಬೆಳಗ್ಗೆ 9.30ರವರೆಗೂ ತೋಟದಲ್ಲಿ ಕಾಣಿಸಿಕೊಂಡಿದ್ದರು. ಅದಾದ ನಂತರ ಅವರು ಕಣ್ಮರೆಯಾಗಿದ್ದರು.
ಏಪ್ರಿಲ್ 17ರಂದು ಸುಬ್ರಾಯ ಹೆಗಡೆ ಅವರ ತೋಟದ ಬಾವಿಯಲ್ಲಿ ಮರ ಬಿದ್ದಿರುವುದು ಕಾಣಿಸಿತು. ಆ ಮರದಲ್ಲಿಯೇ ಪರಮಾ ಗೌಡ ಅವರು ಸಿಕ್ಕಿ ಬಿದ್ದಿದ್ದರು. 20 ಅಡಿ ಆಳದ ಬಾವಿಯನ್ನು ಸರಿಯಾಗಿ ಗಮನಿಸಿದಾಗ ಅಲ್ಲಿ ಪರಮಾ ಗೌಡ ಅವರು ಸಾವನಪ್ಪಿರುವುದು ಗೊತ್ತಾಯಿತು. ಪಂಪ್‌ಸೆಟ್ ಮುಂದಿದ್ದ ಮಣ್ಣಿನ ಧರೆಯ ಇಳಿಜಾರಿನಲ್ಲಿ ಪರಮಾ ಗೌಡ ಅವರು ಆಕಸ್ಮಿಕವಾಗಿ ಬಿದ್ದು ಬಾವಿ ಸೇರಿದ್ದು, ಮೇಲೆ ಬರಲಾಗದೇ ಸಾವನಪ್ಪಿದ ಶಂಕೆವ್ಯಕ್ತವಾಯಿತು. ಚಿಕ್ಕಪ್ಪನ ಸಾವಿನ ಬಗ್ಗೆ ಗಣಪತಿ ಈಶ್ವರ ಗೌಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಕಾನೂನು ಕ್ರಮ ಜರುಗಿಸಿದರು.