ಈ ದಿನ ಶಿರಸಿಯಲ್ಲಿ ನಡೆಯಬೇಕಿದ್ದ ಮದುವೆಯೊಂದು ದಿಢೀರ್ ಆಗಿ ರದ್ಧಾಗಿದೆ. ಕಾರಣ, ಹಸಮಣೆ ಏರಬೇಕಿದ್ದ ವಧು ನಿಶ್ಚಿತಾರ್ಥ ಮಾಡಿಕೊಂಡ ವ್ಯಕ್ತಿ ಬಿಟ್ಟು ಮತ್ತೊಬ್ಬರನ್ನು ಅರೆಸಿ ಹೋಗಿದ್ದಾರೆ.
ಏಪ್ರಿಲ್ 25ರಂದು ಶಿರಸಿಯ ಸೀಫಾ ಖಾನ್ ಅವರ ವಿವಾಹ ನಡೆಯಬೇಕಿತ್ತು. ಲಂಡನ್’ನಲ್ಲಿ ವಾಸವಾಗಿರುವ ವ್ಯಕ್ತಿಯನ್ನು ಸೀಫಾ ಖಾನ್ ಅವರು ವರಿಸಬೇಕಿತ್ತು. ಈ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಲಾಗಿತ್ತು. ಈ ವಿವಾಹಕ್ಕಾಗಿ ದೇಶ-ವಿದೇಶದಿಂದ ಬಂದು-ಮಿತ್ರರು ಬಂದಿದ್ದರು. ಶಿರಸಿಯ ಉಸರಿ ರಸ್ತೆಯ ಕಲ್ಯಾಣ ಮಂಟಪವನ್ನು ಮದುವೆಗಾಗಿ ಅಲಂಕರಿಸಲಾಗಿತ್ತು. ಮದುವೆಯ ಎಲ್ಲಾ ಬಗೆಯ ತಯಾರಿಗಳು ಜೋರಾಗಿ ನಡೆದಿತ್ತು. ಆದರೆ, ಸೀಫಾ ಖಾನ್ ಅವರಿಗೆ ಲಂಡನ್ ವರನನ್ನು ವರಿಸಲು ಇಷ್ಟವಿರಲಿಲ್ಲ. ವೈದ್ಯಕೀಯ ವಿದ್ಯಾರ್ಥಿಯೊಬ್ಬರನ್ನು ಸೀಫಾ ಖಾನ್ ಅವರು ಪ್ರೀತಿಸುತ್ತಿದ್ದು, ಅವರ ಜೊತೆಯೇ ಬಾಳಿ ಬದುಕುವ ಕನಸು ಕಂಡಿದ್ದರು. ಹೀಗಾಗಿ ಮದುವೆ ಮಂಟಪಕ್ಕೆ ಬರುವ ಮುನ್ನವೇ ಸೀಫಾ ಖಾನ್ ಅವರು ಕಾಣೆಯಾದರು.
ಮದು ಮಗಳನ್ನು ಸಿದ್ಧಪಡಿಸಲು ನೆಂಟರು ವಧುವಿನ ಕೋಣೆ ಪ್ರವೇಶಿಸಿದಾಗ ಅಲ್ಲಿ ಸೀಫಾ ಖಾನ್ ಅವರು ಕಾಣಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಗಲಿಲ್ಲ. ಮದುವೆ ಮಗಳು ಕಾಣೆಯಾದ ಬಗ್ಗೆ ಕುಟುಂಬದವರು ಆತಂಕಕ್ಕೆ ಒಳಗಾದರು. ಮದುವೆ ನಿಂತು ಹೋಗಿದ್ದರಿಂದ ಮನೆಯವರು ಆಘಾತ ಅನುಭವಿಸಿದರು. ದೂರ ದೂರದ ಊರುಗಳಿಂದ ಆಗಮಿಸಿದ ಬಂದು-ಮಿತ್ರರು ಸಹ ಈ ಘಟನೆಯಿಂದ ನೋವು ಅನುಭವಿಸಿದರು. ಎಲ್ಲಿ ಹುಡುಕಿದರೂ ಯುವತಿ ಪತ್ತೆಯಾಗದ ಹಿನ್ನೆಲೆ ಪಾಲಕರು ಪೊಲೀಸ್ ಠಾಣೆ ಮೆಟ್ಟಿಲೇರಿದರು.
ಈ ವೇಳೆ ಸೀಫಾ ಖಾನ್ ಅವರು ವೈದ್ಯಕೀಯ ವಿದ್ಯಾರ್ಥಿಯೊಬ್ಬರನ್ನು ಪ್ರೀತಿಸುತ್ತಿದ್ದ ವಿಷಯ ಹೊರಬಂದಿತು. ಆ ವಿದ್ಯಾರ್ಥಿ ಜೊತೆಯೇ ಪರಾರಿಯಾಗಿರುವ ಬಗ್ಗೆ ಕುಟುಂಬದವರು ಅನುಮಾನವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಈ ಪ್ರೀತಿ ವಿಷಯ ಗೊತ್ತಾಗಿದ್ದು, ಅದನ್ನು ಒಪ್ಪದ ಬಗ್ಗೆಯೂ ಪಾಲಕರು ಬಾಯ್ಬಿಟ್ಟರು. ಅದಾಗಿಯೂ, ಮಗಳನ್ನು ಹುಡುಕಿ ಕೊಡಿ ಎಂದು ಝಹೀರ್ ಖಾನ್ ಅವರು ಪೊಲೀಸರಿಗೆ ಮನವಿ ಮಾಡಿದರು. ಸದ್ಯ ಶಿರಸಿಯ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಸೀಫಾ ಖಾನ್ ಅವರ ಶೋಧ ಶುರು ಮಾಡಿದ್ದಾರೆ.