ಶಿರಸಿ ನೆಹರು ನಗರದ ಪಂಚಾಕ್ಷರಿ ಕಲ್ಲೂರು ಹಾಗೂ ಹೆಗಡೆಕಟ್ಟಾದ ಅಂತೋನಿ ವಲವೇರಾ ಅವರು ಸಂಚರಿಸುತ್ತಿದ್ದ ರಿಕ್ಷಾಗೆ ಬುಲೆರೋ ಗುದ್ದಿ ಪರಾರಿಯಾಗಿದ್ದ ಕೆಎಚ್‌ಬಿ ಕಾಲೋನಿಯ ಮೋಹನ ಪಾಲಕರ್ ಅವರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮೂರು ವರ್ಷಗಳಿಂದ ನ್ಯಾಯಾಲಯಕ್ಕೂ ಬಾರದೇ ತಪ್ಪಿಸಿಕೊಂಡಿದ್ದ ಮೋಹನ್ ಪಾಲಕರ್ ಅವರನ್ನು ಹಿಡಿದ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
2018ರ ಜೂನ್ 25ರ ಸಂಜೆ ನೆಹರು ನಗರದ ಪಂಚಾಕ್ಷರಿ ಈರಣ್ಣ ಕಲ್ಲೂರು ಅವರು ಹೆಗಡೆಕಟ್ಟಾದ ಅಂತೋನಿ ವಲವೇರಾ ಅವರನ್ನು ಕೂರಿಸಿಕೊಂಡು ರಿಕ್ಷಾದಲ್ಲಿ ಹೊರಟಿದ್ದರು. ಹೆಗಡೆಕಟ್ಟಾದಿಂದ ಶಿರಸಿ ಕಡೆ ಹೋಗುವಾಗ ರುದ್ರಮೂಲೆ ಬಳಿಯ ತಿರುವಿನಲ್ಲಿ ಅವರ ರಿಕ್ಷಾಗೆ ಬುಲೇರೋ ಡಿಕ್ಕಿ ಹೊಡೆದಿತ್ತು. ರಿಕ್ಷಾದಲ್ಲಿದ್ದ ಇಬ್ಬರಿಗೂ ಗಾಯವಾಗಿದ್ದು, ಬುಲೆರೋ ಚಾಲಕ ಅಲ್ಲಿಂದ ಪರಾರಿಯಾಗಿದ್ದರು. ಅದಾದ ನಂತರ ಪೊಲೀಸರು ಆರೋಪಿತ ಚಾಲಕನನ್ನು ಹುಡುಕಿದ್ದರು.
ಕೆಎಚ್‌ಬಿ ಕಾಲೋನಿಯ ಮೋಹನ ಗಣಪತಿ ಪಾಲಕರ್ ಅವರು ಆ ದಿನ ಬುಲೆರೋ ಓಡಿಸುತ್ತಿರುವುದು ಗೊತ್ತಾಗಿದ್ದು, ಅವರನ್ನು ಕೋರ್ಟಿಗೆ ಹಾಜರುಪಡಿಸಿದ್ದರು. ಆದರೆ, ಮೋಹನ ಪಾಲಕರ್ ಅವರು ಮೂರು ವರ್ಷದಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದರು. ನ್ಯಾಯಾಲಯಕ್ಕೂ ಹಾಜರಾಗದೇ ತಪ್ಪಿಸಿಕೊಂಡಿದ್ದರು. ಈ ಹಿನ್ನಲೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದ್ದು, ಶಿರಸಿ ನಗರ ಪೊಲೀಸರು ಆರೋಪಿಯ ಶೋಧ ನಡೆಸಿದರು.
ಪಿಸೈ ನರಸಿಂಹಲು, ಪೊಲೀಸ್ ಸಿಬ್ಬಂದಿ ತುಕರಾಮ ಬಣಗಾರ್, ರಾಮಯ್ಯ ಪೂಜಾರಿ, ಹನುಮಂತ ಮಕಾಪುರ ಸೇರಿ ಆರೋಪಿಯನ್ನು ಹಿಡಿದರು. ಸಿಕ್ಕಿಬಿದ್ದ ಮೋಹನ ಪಾಲಕರ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.