ಕಾರವಾರದ ಕಿನ್ನರ ಮಸೀದಿ ಬಳಿ ವೇಗವಾಗಿ ಟಿಪ್ಪರ್ ಚಲಿಸಿದ್ದು, ಅದನ್ನು ಪ್ರಶ್ನಿಸಿದ ಕಾರಣ ಅಂಬೇಜೂಗದ ವಿಜಯ ನಾಗೇಕರ್ ಅವರ ಮೇಲೆ ಹಲ್ಲೆಯಾಗಿದೆ. ಶೇಜವಾಡದ ಮಂಜುನಾಥ ಬಾಂದೇಕರ್, ಜೀವನ ಪವಾರ್ ಹಾಗೂ ಮತ್ತೆ ಮೂರು ಜನ ಸೇರಿ ಈ ಆಕ್ರಮಣ ನಡೆಸಿದ್ದಾರೆ.
ಕಾರವಾರದ ಕಿನ್ನರ ಬಳಿಯ ಅಂಬೇಜೂಗದಲ್ಲಿ ವಿಜಯ ತುಕಾರಾಮ ನಾಗೇಕರ್ ಅವರು ವಾಸವಾಗಿದ್ದಾರೆ. ಏಪ್ರಿಲ್ 15ರ ರಾತ್ರಿ 11.30ಕ್ಕೆ ಅವರು ಕಿನ್ನರ ಮಸೀದಿ ಬಳಿ ನಡೆದು ಹೋಗುತ್ತಿದ್ದರು. ಆಗ, ಟಿಪ್ಪರೊಂದು ಸಮೀಪದಿಂದ ವೇಗವಾಗಿ ಸಂಚರಿಸಿದ್ದು, ಅದರಿಂದ ವಿಜಯ ನಾಗೇಕರ್ ಅವರು ಆತಂಕಕ್ಕೆ ಒಳಗಾದರು. ಕೂಡಲೇ ಜೋರಾಗಿ ಕೂಗಿದ ವಿಜಯ ನಾಗೇಕರ್ ಅವರು `ನಿಧಾನವಾಗಿ ಹೋಗು’ ಎಂದು ಟಿಪ್ಪರ್ ಚಾಲಕನಿಗೆ ಸೂಚಿಸಿದರು.
ಅದಾದ ನಂತರ ಆ ಟಿಪ್ಪರ್ ಅಲ್ಲಿಯೇ ನಿಂತಿತು. ಅದರ ಚಾಲಕ ವಿಜಯ ನಾಗೇಕರ್ ಅವರ ಬಳಿ ನಡೆದು ಬಂದು ಜಗಳ ಮಾಡಿದರು. ಆ ಚಾಲಕ ಫೋನ್ ಮಾಡಿ ಅಲ್ಲಿ ಜನರನ್ನು ಕರೆಯಿಸಿದರು. ಆಗ, ಶೇಜವಾಡದ ಮಂಜುನಾಥ ಬಾಂದೇಕರ್ ಹಾಗೂ ಜೀವನ ಪವಾರ್ ಅಲ್ಲಿಗೆ ಆಗಮಿಸಿದರು. ಅವರಿಬ್ಬರು ಮತ್ತಿಬ್ಬರನ್ನು ಕರೆದುಕೊಂಡು ಬಂದಿದ್ದು, ಟಿಪ್ಪರ್ ಚಾಲಕನೂ ಸೇರಿ ಒಟ್ಟು ಐದು ಜನ ವಿಜಯ ನಾಗೇಕರ್ ಅವರ ಮೇಲೆ ಮುಗಿಬಿದ್ದರು.
ಆ ಐದು ಜನ ವಿವಿಧ ಆಯುಧಗಳಿಂದ ವಿಜಯ ನಾಗೇಕರ್ ಅವರ ಬೆನ್ನು, ಸೊಂಟಕ್ಕೆ ಹೊಡೆದರು. ಕಾಲಿನಿಂದ ಒದ್ದು ನೋವು ಮಾಡಿದರು. ಪರಿಣಾಮ ವಿಜಯ ನಾಗೇಕರ್ ಅವರು ಗಾಯಗೊಂಡು ಆಸ್ಪತ್ರೆ ಸೇರಿದರು. ಆಸ್ಪತ್ರೆಯಿಂದಲೇ ಪೊಲೀಸ್ ಹೇಳಿಕೆ ನೀಡಿದ ವಿಜಯ ನಾಗೇಕರ್ ಅವರು ಆ ಐದು ಜನರ ವಿರುದ್ಧ ದೂರು ನೀಡಿದರು. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಸದ್ಯ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ್ದಾರೆ.