ಶಿರಸಿ ಮಲೆನಳ್ಳಿಯ ಅಜಿತಾ ಗೌಡ ಅವರು ನಿರ್ಮಿಸಿದ ಬೇಲಿಯನ್ನು ಪಕ್ಕದಮನೆಯವರು ಕಿತ್ತಿದ್ದಾರೆ. ಅದನ್ನು ಪ್ರಶ್ನಿಸಿದ ಕಾರಣ ಅಜಿತಾ ಗೌಡ ಅವರ ಮೇಲೆ ಮೂವರು ಸೇರಿ ಹೊಡೆದಿದ್ದಾರೆ. ಹೊಡೆದಾಟ ತಪ್ಪಿಸಲು ಹೋದ ಅಜಿತಾ ಗೌಡ ಅವರ ಪತಿ ಮಂಜುನಾಥ ಗೌಡ ಅವರಿಗೂ ಆ ಮೂವರು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಶಿರಸಿ ಮಲೆನಳ್ಳಿಯ ಅರಸಾಪುರದಲ್ಲಿ ಅಜೀತಾ ಮಂಜುನಾಥ ಗೌಡ ಅವರು ವಾಸವಾಗಿದ್ದಾರೆ. ಅಲ್ಲಿಯೇ ಅವರು ಅಡಿಕೆ ತೋಟ ಹೊಂದಿದ್ದು, ಆ ತೋಟದ ತುದಿಗೆ ಶ್ರೀಧರ ಗೌಡ ಅವರ ಮನೆಯಿದೆ. ಆ ಮನೆಯಲ್ಲಿ ಶ್ರೀಧರ ಮಹಾದೇವ ಗೌಡ, ಮಹಾದೇವ ನಾರಾಯಣ ಗೌಡ ಹಾಗೂ ನೇತ್ರಾವತಿ ಮಹಾದೇವ ಗೌಡ ಅವರು ವಾಸವಾಗಿದ್ದಾರೆ. ಅಜೀತಾ ಗೌಡ ಅವರ ಅಡಿಕೆ ತೋಟಕ್ಕೆ ಪದೇ ಪದೇ ದನ-ಕರುಗಳು ನುಗ್ಗುತ್ತಿದ್ದು, ಜಾನುವಾರು ಹಾವಳಿ ತಡೆಗಾಗಿ ಅವರು ತೋಟದ ಸುತ್ತ ಬೇಲಿ ನಿರ್ಮಿಸಿದ್ದಾರೆ. ಆದರೆ, ಏಪ್ರಿಲ್ 8ರಂದು ಶ್ರೀಧರ ಗೌಡ ಅವರ ಕುಟುಂಬದವರು ಆ ಬೇಲಿಯನ್ನು ಮುರಿದಿದ್ದಾರೆ.
ತಾವು ತೋಟಕ್ಕೆ ನಿರ್ಮಿಸಿದ ಬೇಲಿ ಮುರಿದ ಕಾರಣ ಕೇಳಲು ಅಜೀತಾ ಗೌಡ ಅವರು ಶ್ರೀಧರ ಗೌಡ ಅವರ ಮನೆಗೆ ಹೋಗಿದ್ದಾರೆ. `ನಮ್ಮ ಜಾಗದಲ್ಲಿ ನೀವು ಬೇಲಿ ಮಾಡಿದ್ದೀರಿ’ ಎಂದು ಶ್ರೀಧರ ಗೌಡ ಅವರ ಕುಟುಂಬದವರು ದಬಾಯಿಸಿದ್ದಾರೆ. ಜೊತೆಗೆ ಅಜೀತಾ ಗೌಡ ಅವರ ಕೈ ಹಿಡಿದು ಶ್ರೀಧರ ಗೌಡ ಅವರು ಎಳೆದಿದ್ದಾರೆ. ಈ ವೇಳೆ ಮಹಾದೇವ ಗೌಡ ಹಾಗೂ ನೇತ್ರಾವತಿ ಗೌಡ ಅವರು ಅಜೀತಾ ಗೌಡ ಅವರ ಬೆನ್ನಿಗೆ ಬಾರಿಸಿದ್ದಾರೆ. ಈ ಹೊಡೆದಾಟ ನೋಡಿದ ಅಜೀತಾ ಗೌಡ ಅವರ ಪತಿ ಮಂಜುನಾಥ ಗೌಡ ಅವರು ಅಲ್ಲಿಗೆ ಧಾವಿಸಿದ್ದು, ಆ ಮೂವರು ಸೇರಿ ಮಂಜುನಾಥ ಗೌಡ ಅವರ ಮೇಲೆಯೂ ಕೈ ಮಾಡಿದ್ದಾರೆ.
ಅಡಿಕೆ ತೋಟದ ರಕ್ಷಣೆಗೆ ನಿರ್ಮಿಸಿದ ಬೇಲಿ ಹಾಳು ಮಾಡಿದಲ್ಲದೇ, ತಮಗೂ ರಕ್ಷಣೆಯಿಲ್ಲದ ಹಾಗೇ ಮಾಡಿದ ಎದುರಾಳಿಗಳ ವಿರುದ್ಧ ಅಜೀತಾ ಗೌಡ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.